ಹರಪನಹಳ್ಳಿ ಪಿಜಿ ಸೆಂಟರ್‌ಗೆ 100 ಎಕರೆ ಭೂಮಿ ಕೊಡಿಸಲು ಯತ್ನ: ಶಾಸಕಿ ಎಂ.ಪಿ. ಲತಾ

KannadaprabhaNewsNetwork |  
Published : Mar 01, 2024, 02:17 AM IST
ಹರಪನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಚೇರಿ.ನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಕುಲಪತಿ ಅನಂತ ಎಲ್‌.ಝಂಡೇಕರ್‌ ಇತರರು ಹಾಜರಿದ್ದರು. | Kannada Prabha

ಸಾರಾಂಶ

ಹರಪನಹಳ್ಳಿ ಶೈಕ್ಷಣಿಕ ಹಬ್‌ ಆಗಿದ್ದು, ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್‌ಗಳ ಅಧ್ಯಯನ ಮಾಡಲು ದೂರದ ನಗರಗಳಿಗೆ ಹೋಗುತ್ತಿರುವುದನ್ನು ಮನಗಂಡು ಇಲ್ಲಿ ಪಿಜಿ ಸೆಂಟರ್‌ ತೆರೆಯಲಾಗಿದೆ.

ಹರಪನಹಳ್ಳಿ: ಪಟ್ಟಣದಲ್ಲಿ ಆರಂಭವಾಗಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 100 ಎಕರೆ ಭೂಮಿ ನೀಡಲು ಪ್ರಯತ್ನ ಮಾಡುವುದಾಗಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹೊಸ ಕಟ್ಟಡದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕವಾಗಿ ಮಂಜೂರಾಗಿರುವ ನಾಲ್ಕು ಕೊಠಡಿಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

ಈಗಾಗಲೇ ತಹಸೀಲ್ದಾರ್‌ ಬಳಿ 50 ಎಕರೆ ಭೂಮಿ ನೀಡುವ ಕುರಿತು ಚರ್ಚಿಸಿದ್ದು, ಇನ್ನೂ 50 ಎಕರೆ ಅಂದರೆ 100 ಎಕರೆ ಭೂಮಿಯನ್ನು ಸರ್ಕಾರದಿಂದ ಕೊಡಿಸಲು ಸಕಲ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆ ಆಗಲು ಅನುಕೂಲವಾಗುತ್ತದೆ ಎಂದರು.

ಹರಪನಹಳ್ಳಿ ಶೈಕ್ಷಣಿಕ ಹಬ್‌ ಆಗಿದ್ದು, ಇಲ್ಲಿಯ ಸಾಕಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್‌ಗಳ ಅಧ್ಯಯನ ಮಾಡಲು ದೂರದ ನಗರಗಳಿಗೆ ಹೋಗುತ್ತಿರುವುದನ್ನು ಮನಗಂಡು ಇಲ್ಲಿ ಪಿಜಿ ಸೆಂಟರ್‌ ತೆರೆಯಲಾಗಿದೆ ಎಂದರು.

ಇಲ್ಲಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ ಶಾಸಕರು, ಇದರ ಸದುಪಯೋಗವನ್ನು ಹರಪನಹಳ್ಳಿ ಸೇರಿದಂತೆ ಸುತ್ತಮುತ್ತ ತಾಲೂಕುಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನಂತ ಎಲ್‌. ಝಂಡೇಕರ್‌ ಮಾತನಾಡಿ, ಉನ್ನತ ಶಿಕ್ಷಣ ದೂರದ ಬೆಟ್ಟವಾಗಬಾರದು. ಪ್ರತಿಯೊಬ್ಬರ ಮನೆ ಮನೆಗೂ ತಲುಪಬೇಕು. ಹೆಣ್ಣುಮಕ್ಕಳು ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು ಎಂದರು.

ಸಂಚಾಲಕರಾಗಿ ಡಾ. ಪ್ರಶಾಂತ: ಇಲ್ಲಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಚಾಲಕರನ್ನಾಗಿ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿಯ ಸಹಾಯಕ ಕುಲಸಚಿವ ಡಾ. ಪ್ರಶಾಂತ ಅವರನ್ನು ನೇಮಕ ಮಾಡಿದ್ದೇನೆ ಎಂದು ಕುಲಸಚಿವರು ಘೋಷಿಸಿದರು.

ವಿವಿಯ ಸಿಂಡಿಕೇಟ್‌ ಸದಸ್ಯ ಸುರೇಶ ಆರ್‌. ಸಜ್ಜನ ಮಾತನಾಡಿ, ಹೊಸದಾಗಿ ಆರಂಭಗೊಂಡಿರುವ ಇಲ್ಲಿಯ ಪಿಜಿ ಸೆಂಟರ್‌ಗೆ ಕನಿಷ್ಠ 200 ವಿದ್ಯಾರ್ಥಿಗಳಾದರೂ ಸೇರ್ಪಡೆಯಾಗಬೇಕು. ಇದರ ಉನ್ನತಿಗೆ ಸರ್ವರೂ ಕೈಜೋಡಿಸಬೇಕು ಎಂದರು.

ಬಳ್ಳಾರಿ ವಿವಿಯ ಕುಲಸಚಿವ ಎಸ್‌.ಎನ್‌. ರುದ್ರೇಶ, ಪ್ರೊ. ರಮೇಶ ಓಲೆಕಾರ ಮಾತನಾಡಿದರು. ವಿವಿಯ ಸಿಂಡಿಕೇಟ್‌ ಸದಸ್ಯ ಟಿ.ಎಂ. ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ತೆಗ್ಗಿನಮಠದ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ, ಬುದ್ಧ ಬಸವ ಅಂಬೇಡ್ಕರ ವಿದ್ಯಾಸಂಸ್ಥೆಯ ಸಂಸ್ಥಾಪಕ ಗುಂಡಗತ್ತಿ ಕೊಟ್ರಪ್ಪ, ಹರಪನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಷಣ್ಮುಖನಗೌಡ, ಹೂವಿನಹಡಗಲಿ ಪ್ರಾಚಾರ್ಯ ಪ್ರೊ. ವಿಜಯಕುಮಾರ, ಎಸ್‌.ಎಸ್‌. ಪಾಟೀಲ್, ಹೊಸಪೇಟೆಯ ಪ್ರಾಚಾರ್ಯ ವಿಶ್ವನಾಥಗೌಡ್ರು, ಕೂಡ್ಲಿಗಿಯ ನಿವೃತ್ತ ಪ್ರಾಚಾರ್ಯ ಪಿ.ಎಂ. ಸೋಮಯ್ಯ, ತಾಪಂ ಮಾಜಿ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪ್ರಾಧ್ಯಾಪಕ ಡಾ. ಭೀಮಪ್ಪ, ಪ್ರಭುನಾಯ್ಕ, ಕಲ್ಲಹಳ್ಳಿ ಗುರುಸಿದ್ದಯ್ಯ, ಕನ್ನಿಹಳ್ಳಿ ಪ್ರಭಾಕರ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ