ಕನ್ನಡಪ್ರಭ ವಾರ್ತೆ ಕಲಬುರಗಿ
ಕೊಲೆಯಾದ ಮಹಾಂತಪ್ಪ ಹೊಲಕ್ಕೆ ಹೋದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಠಾತ್ ದಾಳಿ ನಡೆಸಿ, ಕೊಲೆಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಗೊಳಿಸಿದೆ.
ರಾಡ್‌ನಿಂದ ಕೈಗೊಂಡ ದುಷ್ಕರ್ಮಿಗಳ ದಾಳಿಗೆ ತೀವ್ರಗಾಯಗೊಂಡಿದ್ದ ಆಲೂರೆ ಅವರನ್ನು ಆಳಂದನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಸೋಲ್ಲಾಪೂರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ.ಮಾದನಹಿಪ್ಪರಗಾ ಠಾಣೆಯ ಪಿಎಸ್‍ಐ ವೀರೇಶ ಅವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಡಿವೈಎಸ್‍ಪಿ ಮಹ್ಮದ್ ಶರೀಫ್, ಸಿಪಿಐ ಚನ್ನಯ್ಯಾ ಹಿರೇಮಠ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದಾರೆ.
ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಸಹಕಾರಿ ಧುರೀಣ ಆಲೂರೆ ಅವರು ನಾಲ್ಕು ಬಾರಿ ಸರಸಂಬಾ ಗ್ರಾಮ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ವರ್ಷಗಳಿಂದ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಪ್ರಬಲ ಬೆಂಬಲಿಗರಾಗಿದ್ದ ಆಲೂರೆ ಅವರ ಕೊಲೆ ನಡೆದ ಘಟನೆಯ ಸುದ್ದಿ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿದೆ. ಅಲ್ಲದೆ ಕುಟುಂಬಸ್ಥರ ಹಾಗೂ ಬಂಧು ಬಾಂಧವರ ರೋಧನೆ ಮುಗಿಲು ಮುಟ್ಟಿದೆ.
ಮಾಜಿ ಶಾಸಕ ಭೇಟಿ: ಆಲೂರೆ ಅವರ ಮೇಲೆ ದಾಳಿಯಾದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಸುಭಾಷ ಗುತ್ತೇದಾರ, ಬಿಜೆಪಿ ಮಂಡಲ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಮತ್ತಿತರರು ಸೋಲಾಪೂರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಗುತ್ತೇದಾರ ಅವರು, ಈ ಘಟನೆಯ ಕುರಿತು ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.