ಬರಪೀಡಿತ ಪಟ್ಟಿಯಲ್ಲಿ ಧಾರವಾಡ ಸೇರಿಸಲು ಪ್ರಯತ್ನ

KannadaprabhaNewsNetwork |  
Published : Sep 20, 2026, 03:00 AM IST
ಅರವಿಂದ | Kannada Prabha

ಸಾರಾಂಶ

ಸಂಕಷ್ಟದಲ್ಲಿರುವ ರೈತರ ಬೆನ್ನೆಲುಬಾಗಿ ಸರ್ಕಾರ ನಿಲ್ಲಲಿದೆ. ರೈತರಿಗೆ ದೊರೆಯಬೇಕಾದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ.

ಧಾರವಾಡ:

ತಾಲೂಕಿನ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಹಾಗೂ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಸದಾ ಬದ್ಧರಿದ್ದು, ಬರಪೀಡಿತ ತಾಲೂಕು ಪಟ್ಟಿಯಲ್ಲಿ ಧಾರವಾಡ ಸೇರಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರೈತರ ಬೆನ್ನೆಲುಬಾಗಿ ಸರ್ಕಾರ ನಿಲ್ಲಲಿದೆ. ರೈತರಿಗೆ ದೊರೆಯಬೇಕಾದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಕೈಗಾರಿಕಾ ಕಾರಿಡಾರ್‌ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ತಾಲೂಕಿನ ಹೊಸವಾಳ, ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸರ್ಕಾರ ಪಡೆದುಕೊಂಡಿರುವ ರೈತರ ಜಮೀನುಗಳ ಗಡಿ ಗುರುತಿಸುವಿಕೆ ಹಾಗೂ ಭೂಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ರೈತರ ಹಿತಾಸಕ್ತಿಗೆ ಧಕ್ಕೆ ಬರುವ ಯಾವುದೇ ಕ್ರಮವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಅವರ ಹೇಳಿಕೆಗೆ ಏಗನಗೌಡರ ತಿರುಗೇಟು ನೀಡಿದರು.

ತಹಸೀಲ್ದಾರ್ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಲೋಕಾಯುಕ್ತ ತನಿಖೆ ಸ್ವಾಗತಿಸುತ್ತೇವೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಸಾರ್ವಜನಿಕ ಸೇವೆಯಲ್ಲಿರುವವರು ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು. ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ತಲುಪಿಸುವುದು ಸರ್ಕಾರದ ಉದ್ದೇಶ. ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು ಯಾವುದೇ ಲೋಪವಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸರ್ಕಾರ ಕ್ರಮಕೈಗೊಂಡಿದೆ. ತಪ್ಪು ಮಾಹಿತಿ ಅಥವಾ ನಕಲಿ ದಾಖಲೆಗಳ ಮೂಲಕ ಸೌಲಭ್ಯ ಪಡೆಯುತ್ತಿರುವವರನ್ನು ಗುರುತಿಸಿ, ಆ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ಅರ್ಹ ಪಿಂಚಣಿದಾರರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚನ್ನಬಸಪ್ಪ ಮಟ್ಟಿ, ದೀಪಾ ನೀರಲಕಟ್ಟಿ, ಗಿರೀಶ ಕಲ್ಲಾಪುರ, ಶಂಕರ ಇಳಿಗೇರ, ಕಿಶೋರ ಬಡಿಗೇರ್, ಇಬ್ರಾಹಿಂ ಗುಡಸಲಮನಿ, ಚಿದಾನಂದ್ ಚಂದರಗಿ ಇದ್ದರು. ದೇಸಾಯಿ, ಸೀಮಾ ವಾಸ್ತವಾಂಶ ಅರಿಯಲಿ..

ಕ್ಷೇತ್ರದಲ್ಲಿ ಶಾಸಕ ವಿನಯ ಕುಲಕರ್ಣಿ ನಿರಂತರವಾಗಿ ಜನರ ನಡುವೆ ಸಂಚರಿಸಿ, ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಬಿಜೆಪಿ ಮುಖಂಡರು ಕೇವಲ ರಾಜಕೀಯ ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪ ಹಾಗೂ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಶಾಸಕರಾದ ಅಮೃತ ದೇಸಾಯಿ ಮತ್ತು ಸೀಮಾ ಮಸೂತಿ ವಾಸ್ತವಾಂಶ ಅರಿತು ಮಾತನಾಡಬೇಕು. ರಾಜಕೀಯ ಕಾರಣಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನನ್ನು ಕೈಬಿಡಬೇಕು.

ಅರವಿಂದ ಏಗನಗೌಡರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಗಲು ನಿರಂತರ ೭ ಗಂಟೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿ
ಕ್ವಾರಿ ಮಾಲೀಕರಿಗೆ ನೋಟಿಸ್ ನೀಡಿರುವವರ ಪೈಕಿ ನಾನೂ ಒಬ್ಬ-ಸಚಿವ ಲಮಾಣಿ