Organ failure should not become a curse to a person's life.

- ಸರಸ್ವತಿ ನಾಗರಾಜ್ ಅಭಿಪ್ರಾಯ। ಕಿವಿ ತಪಾಸಣಾ ಶಿಬಿರ, ಶ್ರವಣ ಯಂತ್ರ ಖರೀದಿಗೆ ಸಹಾಯಧನ ವಿತರಣೆ

ಕನ್ನಡಪ್ರಭ ವಾರ್ತೆ ಆನಂದಪುರ

ಅಂಗ ವೈಫಲ್ಯವು ಮನುಷ್ಯನ ಜೀವನಕ್ಕೆ ಶಾಪವಾಗಬಾರದು ಎಂದು ಸಾಗರ ಶ್ರೀಗಂಧ ಲಯನ್ಸ್ ಕ್ಲಬ್ ಅಧ್ಯಕ್ಷ ಸರಸ್ವತಿ ನಾಗರಾಜ್ ತಿಳಿಸಿದರು.

ಅವರು ಗಣಪತಿ ಸಮುದಾಯ ಭವನದಲ್ಲಿ ಶ್ರೀಗಂಧ ಲಯನ್ಸ್ ಕ್ಲಬ್ ಸಾಗರ ಮತ್ತು ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಿವಿ ತಪಾಸಣಾ ಶಿಬಿರ ಮತ್ತು ಶ್ರವಣ ಯಂತ್ರ ಖರೀದಿಗೆ ಸಹಾಯಧನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನುಷ್ಯನಿಗೆ ದೇಹದ ಎಲ್ಲ ಅಂಗಗಳ ಆರೋಗ್ಯ ಅತ್ಯಂತ ಮುಖ್ಯ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತಿ ಮುಖ್ಯ. ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಆರಂಭದಲ್ಲಿಯೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಮನುಷ್ಯನ ಅಂಗದ ವೈಫಲ್ಯವು ಜೀವನಕ್ಕೆ ಶಾಪವಾಗಬಾರದು ಎಂದು ಹೇಳಿದರು.

ಶಿಬಿರವನ್ನು ಉದ್ಘಾಟಿಸಿದ ಶ್ರವಣ ತಜ್ಞ ಡಾ. ಪವನ್ ಕುಮಾರ್ ಮಾತನಾಡಿ, ಮನುಷ್ಯ ಉತ್ತಮ ಆರೋಗ್ಯದ ಕಡೆ ಗಮನಹರಿಸುವುದರೊಂದಿಗೆ ಕಿವಿಯಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಕಿವಿಯಲ್ಲಿರುವ ಸಣ್ಣ ಸಮಸ್ಯೆಯನ್ನು ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಒಳ್ಳೆಯದು ಇಲ್ಲವಾದಲ್ಲಿ ಸಣ್ಣ ಸಮಸ್ಯೆ ಉಲ್ಬಣ ಗೊಂಡರೆ ಶಸ್ತ್ರಚಿಕಿತ್ಸೆಯ ಅಗತ್ಯ ಎದುರಾಗಬಹುದು. ಆದ್ದರಿಂದ, ಕಿವಿಯ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.

ಇತಿಹಾಸ ಪರಂಪರೆ ಉಳಿಸಿ ಅಭಿಯಾನದ ಸಂಚಾಲಕ ಬಿ.ಡಿ. ರವಿಕುಮಾರ್ ಮಾತನಾಡಿ, ಅಭಿಯಾನದಿಂದ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ವಿವಿಧ ಆರೋಗ್ಯ ಶಿಬಿರಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಇಂತಹ ಶಿಬಿರಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ. ಆರೋಗ್ಯ ಸೇವೆಗಳು ಬಡವರಿಗೂ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಈ ರೀತಿಯ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈಶ್ವರ್ ಮಲ್ಪೆ ಆರೋಗ್ಯ ಶಿಬಿರ ಮುಖ್ಯ ಸಂಚಾಲಕ ಲವ ಬಂಗೇರ ಮಾತನಾಡಿ, ಈಶ್ವರ್ ಮಲ್ಪೆ ತಂಡದ ಸೇವಾ ಕಾರ್ಯಗಳ ಉದ್ದೇಶ ಹಾಗೂ ವಿವಿಧ ಆರೋಗ್ಯ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಶಿಬಿರದಲ್ಲಿ ಒಟ್ಟು 54 ಜನರನ್ನು ಕಿವಿ ತಪಾಸಣೆಗೆ ಒಳಪಡಿಸಲಾಯಿತು. ಅವರಲ್ಲಿ 8 ಜನರನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದ 24 ಜನರಿಗೆ ಶ್ರವಣ ಯಂತ್ರ ಖರೀದಿಗೆ ಕಪಾಸಣಾ ಸಂದರ್ಭದಲ್ಲಿ ಸಹಾಯಧನ ನೀಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಯಶೋಧ, ಮೇಜರ್ ನಾಗರಾಜ್, ವೆಂಕಟೇಶ್ ಚಂದಳ್ಳಿ, ಜಿತೇಂದ್ರ, ಹನುಮಂತಪ್ಪ ಉಪಸ್ಥಿತರಿದ್ದರು.

ಫೋಟೋ 6 ಎ, ಎನ್, ಪಿ 2

ಆನಂದಪುರದಲ್ಲಿ ಶ್ರೀಗಂಧ ಲಯನ್ಸ್ ಕ್ಲಬ್ ಸಾಗರ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಆನಂದಪುರ ಇವರ ಸಹಯೋಗದಲ್ಲಿ ಕಿವಿ ತಪಾಸಣಾ ಶಿಬಿರ ಮತ್ತು ಶ್ರವಣ ಯಂತ್ರ ಖರೀದಿಗೆ ಸಹಾಯಧನ ವಿತರಣೆ ಕಾರ್ಯಕ್ರಮನ್ನು ಶ್ರವಣ ತಜ್ಞ ಡಾ. ಪವನ್ ರೋಗಿಗಳನ್ನು ಪರೀಕ್ಷಿಸುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.