ಸರ್ಕಾರಕ್ಕೆ ಜನರ ಬಗ್ಗೆ ಕಳಕಳಿ ಇಲ್ಲ. ಬೆಲೆ ಏರಿಕೆಯ ಮೂಲಕ ಬಡವರಿಗೆ ಬರೆ ಎಳೆಯುವ ಕಾಯಕ ಮಾತ್ರ ನಿತ್ಯ ನಿರಂತರವಾಗಿದೆ

ಹಗರಿಬೊಮ್ಮನಹಳ್ಳಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಎನ್.ಡಿ.ಎ.ಶಾಸಕರೆಲ್ಲರೂ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಸದನದಲ್ಲಿ ಉಗ್ರ ಹೋರಾಟ ನಡೆಸುವ ಮೂಲಕ ಜನ ಕಲ್ಯಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ನೇಮಿರಾಜ್ ನಾಯ್ಕ ಸ್ಪಷ್ಟಪಡಿಸಿದರು.

ತಾಲೂಕಿನ ವರದಾಪುರ ಗ್ರಾಮದಲ್ಲಿ ಶುಕ್ರವಾರ ಕೆಂಚಟನಹಳ್ಳಿ-ವರದಾಪುರ ಕೆರೆಗೆ ಶಾಶ್ವತ ನೀರೊದಗಿಸುವ ಯೋಜನೆಯ ಡಿಪಿಆರ್ ಸಮೀಕ್ಷೆಯ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಸಾರ್ವಜನಿಕರ ಹಿತ ಮರೆತಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯ ಮೂಲಕ ಸಾರ್ವಜನಿಕರ ನಿತ್ಯ ಜೀವನ ನರಕ ಸದೃಶವಾಗಿಸಿದೆ. ಇಂತಹ ಜನವಿರೋಧಿ ಸರ್ಕಾರದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಜನರ ಬಗ್ಗೆ ಕಳಕಳಿ ಇಲ್ಲ. ಬೆಲೆ ಏರಿಕೆಯ ಮೂಲಕ ಬಡವರಿಗೆ ಬರೆ ಎಳೆಯುವ ಕಾಯಕ ಮಾತ್ರ ನಿತ್ಯ ನಿರಂತರವಾಗಿದೆ. ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಸೇರಿದಂತೆ ಬಹುತೇಕ ಮಾಸಾಶನ ಸ್ತಬ್ಧವಾಗಿವೆ. ೫ ಲಕ್ಷ ನಿರ್ಗತಿಕ ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಲು ಕಾಂಗ್ರೆಸ್ ಸರ್ಕಾರ ಸಂಚು ನಡೆಸಿದೆ ಎಂದು ಆರೋಪಿಸಿದರು.

ಕ್ಷೇತ್ರದ ವ್ಯಾಪ್ತಿಯ ನೀರಾವರಿ ಯೋಜನೆಗಳ ಜಾರಿಗೆ ಅನುದಾನ ಒದಗಿಸುವಂತೆ ಒತ್ತಾಯಿಸಿ ತಾವು ಸಲ್ಲಿಸಿರುವ ಸಾಕಷ್ಟು ಪ್ರಸ್ತಾವನೆಗಳಿಗೆ ಸರ್ಕಾರದ ಸೂಕ್ತ ಸ್ಪಂದನೆ ಇಲ್ಲದಂತಾಗಿದೆ. ಇದೊಂದು ಕಣ್ಣು ಕಿವಿ ಇಲ್ಲದ ದರಿದ್ರ ಸರ್ಕಾರ. ಇಂತಹ ಸರ್ಕಾರ ಯಾರಿಗೆ ಬೇಕಾಗಿದೆ ಎಂದು ವಿರುದ್ಧ ಹರಿಹಾಯ್ದರು.

ಗೃಹ ಸಚಿವರು ಲಂಗು ಲಗಾಮಿಲ್ಲದೇ ಮಾತಾಡುತ್ತಿದ್ದಾರೆ. ಹಣದ ದರ್ಪ ಹಾಗೂ ಅಧಿಕಾರದ ಮದ ನೆತ್ತಿಗೇರಿಸಿಕೊಂಡು ಮರೆಯುತ್ತಿರುವ ಪ್ರಿಯಾಂಕ ಖರ್ಗೆಯವರಿಗೆ ೨೦೨೮ರಲ್ಲಿ ರಾಜ್ಯದ ಹಳ್ಳಿ ಗುಗ್ಗುಗಳು ತಮ್ಮ ಶಕ್ತಿ ತೋರಿಸಲಿದ್ದಾರೆ ಎಂದು ಕಾಲೆಳೆದರು.

ಮುಂಬರುವ ಸ್ಥಳಿಯ ಚುನಾವಣೆಗಳಲ್ಲಿ ಮೈತ್ರಿ ಖಚಿತ ಈ ಕುರಿತು ಯಾವುದೇ ಗೊಂದಲವಿಲ್ಲ. ಈ ನಿಟ್ಟಿನಲ್ಲಿ ನಮ್ಮ ನಾಯಕ ಕುಮಾರಣ್ಣನವರ ನೇತೃತ್ವದಲ್ಲಿ ಎರಡು ಬಾರಿ ಸಮನ್ವಯ ಸಮತಿಯ ಸಭೆ ನಡೆಸಲಾಗಿದೆ. ಮುಂದಿನ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆ ಕೂಡಾ ಎನ್.ಡಿ.ಎ. ಒಕ್ಕೂಟದಡಿಯಲ್ಲಿಯೇ ನಡೆಸುವ ಸುಳಿವು ನೀಡಿದರು.

ಇದಕ್ಕೂ ಮುನ್ನ ಶಾಸಕರು ತಾಲೂಕಿನ ಚಿಲಗೋಡು ಗ್ರಾಮದ ಬಳಿ ₹೧೦೦ಲಕ್ಷ ಅನುದಾನದಲ್ಲಿ ಗ್ರಾಮದಿಂದ ತಂಬ್ರಹಳ್ಳಿ ಮುಖ್ಯ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಕನ್ನಿಹಳ್ಳಿ ಚಂದ್ರಶೇಖರ್, ರಾರಾಳು ಶೇಖರಪ್ಪ, ಚಿತವಾಡಗಿ ಪ್ರಕಾಶ್, ತಂಬ್ರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಣಕಾರ್ ಕೊಟ್ರೇಶ್, ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಸಿ.ಎಚ್. ಸಿದ್ಧರಾಜು, ತಾಪಂ ಮಾಜಿ ಸದಸ್ಯ ಪಿ. ಸೂರ್ಯಬಾಬು, ಪಿ.ರಾಜಲಿಂಗಪ್ಪ, ಮಜ್ಜಗಿ ಶಿವಪ್ಪ, ಭಾಷಾ ಸಾಬ್, ವರದಾಪುರ ಚನ್ನಗೌಡ್ರು, ಕುಮಾರ ಸ್ವಾಮಿ, ರಮೇಶ್, ಗುತ್ತಿಗೆದಾರ ದೇವಿಪ್ರಸಾದ್, ಚೇರಮನ್‌ ಕೊಟ್ರೇಶಪ್ಪ, ನರೇಗಲ್ ಬಸವರಾಜ್, ಕೋರಿ ಸಂಗಪ್ಪ, ಭೀಮಣ್ಣ, ರಾಮು, ಹನಮಂತಪ್ಪ ಹಾಗೂ ಬಾಣದ ಹನಮಂತಪ್ಪ ಮತ್ತಿತರರಿದ್ದರು.