ಕನ್ನಡಪ್ರಭ ವಾರ್ತೆ ರಾಮನಗರಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭ ಅದ್ಧೂರಿಯಾಗಿ ಜರುಗಿತು. ಇದನ್ನು ಸಹಿಸದ ಕೆಲವರು ಹೊಟ್ಟೆಕಿಚ್ಚಿನಿಂದ ಸ್ವಾರ್ಥಕ್ಕಾಗಿ ಶಾಸಕರ ತೇಜೋವಧೆಯಲ್ಲಿ ತೊಡಗಿದ್ದಾರೆ ಎಂದು ದಲಿತ ಸಮುದಾಯದ ಮುಖಂಡ ಶಿವಶಂಕರ್ ತಿರುಗೇಟು ನೀಡಿದರು.ನಗರದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಆಯೋಜಿಸಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ಬದಲಾಗಿ ಶಾಸಕ ಇಕ್ಬಾಲ್ ಹುಸೇನ್ ಅವರು ಅಂಬೇಡ್ಕರ್ ಜಯಂತಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಎಲ್ಲರು ಮೆಚ್ಚುವಂತೆ ಅರ್ಥಪೂರ್ಣವಾಗಿ ಸಮಾರಂಭ ನಡೆಸಿದ್ದಾರೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಶಾಸಕರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಸಮುದಾಯದ ಕೆಲವರು ಅದೇ ದಿನ ಪರ್ಯಾಯವಾಗಿ ಭೀಮೋತ್ಸವ ಎಂಬ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ದಲಿತ ಸಂಘಟನೆಗಳು ಒಟ್ಟಾಗಿ ಸಮುದಾಯದ ಪ್ರಗತಿಗೆ ಶ್ರಮಿಸುವಂತೆ ಕಿವಿ ಮಾತು ಹೇಳಿದ್ದರು. ಇದನ್ನು ಹೊರತುಪಡಿಸಿದರೆ ಅವರು ನಮ್ಮ ಸಮುದಾಯಕ್ಕೆ ಅಥವಾ ಸಂಘಟಕರಿಗೆ ಅವಮಾನ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.ನಮ್ಮ ಸಮುದಾಯದ ಕೆಲ ಸಂಘಟಕರು ರಾಜಕೀಯ ಕಾರಣಕ್ಕೆ ಪಿತೂರಿ ಮಾಡಿಕೊಂಡು ಶಾಸಕರ ಕಚೇರಿ ಮುಂಭಾಗ ಪೊರಕೆ ಚಳುವಳಿ ನಡೆಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್ ಹೆಸರಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡವರು ಯಾರು ಪೊರಕೆ ಚಳವಳಿ ಮಾಡುವ ಸಂಸ್ಕೃತಿ ಹೊಂದಿರುವುದಿಲ್ಲ. ಏನಾದರು ಸಣ್ಣ ಪುಟ್ಠ ತಪ್ಪಾಗಿದ್ದರೆ ಪ್ರಶ್ನೆ ಮಾಡಲಿ ಅದನ್ನು ಬಿಟ್ಟು ಅವರ ಹೇಳಿಕೆಯನ್ನು ತಿರುಚುವುದು ಶೋಭೆ ತರುವುದಿಲ್ಲ ಎಂದು ಟೀಕಿಸಿದರು.ಈ ಹಿಂದೆ ರಾಮನಗರ ಕ್ಷೇತ್ರ ಪ್ರತಿನಿಧಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾದವರು ರಾಮನಗರದ ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡಿಲ್ಲ. ಅವರು ಒಂದೇ ಒಂದು ಜಯಂತಿಯಲ್ಲಿ ಭಾಗವಹಿಸಿದ ನಿದರ್ಶನ ಇಲ್ಲ. ಆದರೆ, ಶಾಸಕ ಇಕ್ಬಾಲ್ ಹುಸೇನ್ ರವರು ಎಲ್ಲ ಸಮುದಾಯಗಳ ಜಯಂತಿ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಾರೆ. ಎಲ್ಲ ವರ್ಗದವರ ಬಗ್ಗೆ ಕಾಳಜಿ ವಹಿಸಿದ್ದು, ಯಾವುದೇ ಜಾತಿ ಧರ್ಮ, ಪಕ್ಷ ಪಾತವಿಲ್ಲದೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದಾರೆ. ಇಂತಹವರು ಶಾಸಕರಾಗಿ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಶಿವಶಂಕರ್ ಹೇಳಿದರು.ಕರ್ನಾಟಕ ಸಮತಾ ಸೈನಿಕ ದಳ ಮುಖಂಡ ಗುಡ್ಡೆ ವೆಂಕಟೇಶ್ ಮಾತನಾಡಿ, ಶಾಸಕರು ಕ್ಷಮೆ ಕೇಳುವಂತಹ ಕೆಲಸ ಏನು ಮಾಡಿಲ್ಲ. ಸ್ವಂತ ಹಣ ಖರ್ಚು ಮಾಡಿ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡಿದ್ದಕ್ಕೆ ಕ್ಷಣೆ ಕೇಳಬೇಕೆ. ಅವರನ್ನು ಪ್ರಶ್ನೆ ಮಾಡುವ ನೈತಿಕತೆ ನಿಮಗಿಲ್ಲ ಎಂದರು.ಅಂಬೇಡ್ಕರ್ ವಾದ (ಮಾವಳ್ಳಿ ಶಂಕರ್ ಬಣ) ವಿಭಾಗೀಯ ಸಂಚಾಲಕ ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಜಯಂತಿಗಾಗಿ ಸಂಘಟಕರು ತೀರ್ಮಾನಿಸಿದ ಎಲ್ಲ ವ್ಯವಸ್ಥೆಗಳನ್ನು ಶಾಸಕರು ಮಾಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದರು. ಇದನ್ನು ಸಹಿಸಿಕೊಳ್ಳಲಾಗದೆ ಕೆಲವು ಕಾಣದ ಕೈಗಳು ನಮ್ಮ ಸಮುದಾಯದ ಒಗ್ಗಟ್ಟನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ನರಸಿಂಹಯ್ಯ ಮಾತನಾಡಿ, ಶಾಸಕರ ವಿರುದ್ಧ ದಲಿತ ಮುಖಂಡರು ಸ್ವಾರ್ಥಕ್ಕಾಗಿ ಹೇಳಿಕೆ ನೀಡುವುದನ್ನು ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ದಲಿತ ಸಂಘಟನೆಗಳ ಜೊತೆಗೂಡಿ ಬೃಹತ್ ಪ್ರಮಾಣದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಸೋಮಶೇಖರ್ (ಮಣಿ), ನಾಗಮ್ಮ, ಗೋವಿಂದರಾಜು, ಜಯಲಕ್ಷ್ಮಮ್ಮ, ದಲಿತ ಸಮುದಾಯದ ಮುಖಂಡರಾದ ಚನ್ನಮಾನಹಳ್ಳಿ ಶ್ರೀನಿವಾಸ್, ಅನಿಲ್ ಜೋಗೇಂದರ್, ಚಲುವರಾಜು, ಶಿವಪ್ರಕಾಶ್ , ಗುರುಮೂರ್ತಿ, ವೆಂಕಟೇಶ್, ಪ್ರಕಾಶ್, ಬಾಬು, ರವಿಕಿರಣ್, ಕೇತೋಹಳ್ಳಿ ಶಿವಲಿಂಗಯ್ಯ, ಶ್ರೀನಿವಾಸ್, ಪಾಪಣ್ಣ, ಶಿವಲಿಂಗಯ್ಯ, ಜಯರಾಮಯ್ಯ ಮತ್ತಿತರರು ಇದ್ದರು.------- 18ಕೆಆರ್ ಎಂಎನ್ 2.ಜೆಪಿಜಿರಾಮನಗರದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಆಯೋಜಿಸಿದ್ದ ಸುದ್ಧಿಗೋಷ್ಟಿಯಲ್ಲಿ ಮುಖಂಡ ಶಿವಶಂಕರ್ ಮಾತನಾಡಿದರು.-----