;Resize=(412,232))
ಬೆಂಗಳೂರು : ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆಗೆ ಸಂಬಂಧಿಸಿದಂತೆ ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಡ್ರ್‌ಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ 8.73 ಕೋಟಿ ರು. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಡೇಪಾಳ್ಯದ ನಿವಾಸಿ ನವೀನ್ ರಾಜ್ ಹಾಗೂ ಸೋಲದೇವನಹಳ್ಳಿಯ ಕ್ರಿಸ್ಟೋಫರ್ ಬಂಧಿತರಾಗಿದ್ದು, ಆರೋಪಿಗಳಿಂದ 1.070 ಕೆಜಿ ಎಂಡಿಎಂಎ, 60 ಎಕ್ಸ್‌ಟೆಸಿ ಹಾಗೂ 5 ಗ್ರಾಂ ಕೊಕೇಕನ್ ಸೇರಿದಂತೆ 2.5 ಕೋಟಿ ರು. ಮೌಲ್ಯದ ಡ್ರಗ್ಸ್ ಮತ್ತು 2 ಲಕ್ಷ ರು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸೋಲದೇವನಹಳ್ಳಿ ಹಾಗೂ ಬಂಡೇಪಾಳ್ಯ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಂ ಸಾರಥ್ಯದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮಂಜಪ್ಪ ಹಾಗೂ ಲಕ್ಷ್ಮೀನಾರಾಯಣ್ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದ್ದಾರೆ.
ಕ್ರಿಸ್ಟೋಫರ್ ಮೂಲತಃ ನೈಜೀರಿಯಾ ದೇಶದವನಾಗಿದ್ದು, ಕಳೆದ ವರ್ಷ ಬ್ಯುಸಿನೆಸ್ ವೀಸಾದಡಿ ದೇಶಕ್ಕೆ ಬಂದಿದ್ದ. ನಂತರ ನಗರಕ್ಕೆ ಬಂದಿಳಿದ ಆತ, ಸೋಲದೇವನಹಳ್ಳಿ ಸಮೀಪ ನೆಲೆಸಿದ್ದ. ಹಣದಾಸೆಗೆ ಆತ ಡ್ರಗ್ಸ್ ದಂಧೆಗಿಳಿದಿದ್ದ. ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಪೂರೈಸಲು ಕ್ರಿಸ್ಟೋಫರ್ ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದೆ. ಈ ವೇಳೆ ವಿದೇಶಿ ಪೆಡ್ಲರ್ ಬಳಿ 1.070 ಕೆಜಿ ಎಡಿಎಂಎ ಸೇರಿದಂತೆ 2.25 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಡೇಪಾಳ್ಯ ಸಮೀಪ ಸಿಸಿಬಿ ನಡೆಸಿದ ಮತ್ತೊಂದು ದಾಳಿಯಲ್ಲಿ ಹೊರ ರಾಜ್ಯದ ಪೆಡ್ಲರ್ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡಿನ ಮೂಲದ ನವೀನ್ ರಾಜ್ ಬಂಧಿತನಾಗಿದ್ದು, ಆತನ ಬಳಿ 5 ಗ್ರಾಂ ಕೊಕೇನ ಸೇರಿದಂತೆ 25 ಲಕ್ಷ ರು ಬೆಲೆಯ ಡ್ರಗ್ಸ್ ಜಪ್ತಿಯಾಗಿದೆ.
ಬಂಡೇಪಾಳ್ಯ ಸಮೀಪ ವಾಸವಾಗಿದ್ದ ಆತ, ಹಲವು ದಿನಗಳಿಂದ ಅಮೆಜಾನ್ ಕಂಪನಿಯ ಡೆಲವರಿ ಬಾಯ್ ಆಗಿ ದುಡಿಯುತ್ತಿದ್ದ. ಆದರೆ ಮೋಜಿನ ಜೀವನ ಕಡೆಗೆ ಆಕರ್ಷಿತನಾದ ನವೀನ್, ಇದಕ್ಕಾಗಿ ಸುಲಭವಾಗಿ ಹಣ ಗಳಿಸಲು ಡ್ರಗ್ಸ್ ಮಾರಾಟದಲ್ಲಿ ತೊಡಗಿ ಈಗ ಜೈಲು ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಐಎನಲ್ಲಿ ಮತ್ತೆ ಜಪ್ತಿ:
ಹೊಸ ವರ್ಷಾಚರಣೆ ಸಂಭ್ರಮದ ಹೊತ್ತಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ 6.23 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬ್ಯಾಂಕಾಕ್‌ನಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರವಾಸಿಗರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆರೋಪಿಗಳಿಂದ 6.23 ಕೋಟಿ ರು. ಮೌಲ್ಯದ 17.80 ಕೆಜಿ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವಸ್ತು ಮಾರಾಟ ಜಾಲ ಮೇಲೆ ಕಸ್ಟಮ್ಸ್ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ವಿದೇಶದಿಂದ ಕಳ್ಳ ಮಾರ್ಗದಲ್ಲಿ ಗಾಂಜಾ ಸಾಗಿಸಲು ಯತ್ನಿಸಿ ಇಬ್ಬರು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ.