ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಭದ್ರತೆಗಾಗಿ ನಿಯೋಜನೆಗೊಳ್ಳುವ ಪೊಲೀಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಬೇಕು, ಚೆನ್ನಮ್ಮ ಪಡೆಯನ್ನು ಸಕ್ರಿಯಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೈಗೊಳ್ಳಲಾಗುವ ಕ್ರಮಗಳ ಕುರಿತು ಮಾಹಿತಿ ಪಡೆದು, ಹಲವು ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೊಸ ವರ್ಷಾಚರಣೆ ಬಳಿಕ ಜನರು ಸುಲಭವಾಗಿ ಮನೆಗೆ ತೆರಳಲು ಮಧ್ಯರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಎಂ.ಜಿ. ರಸ್ತೆ. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಜನರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಜನದಟ್ಟಣೆಯಿಂದ ಯಾವುದೇ ಅನಾಹುತ ನಡೆಯದಂತೆ ಕ್ರಮವಹಿಸಬೇಕು. ಅದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಪೊಲೀಸ್ ಅಧಿಕಾರಿಗಳು, ಡಿ. 31ರ ರಾತ್ರಿ ನಗರದಲ್ಲಿ ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಿಂದ 1,200 ಪೊಲೀಸರನ್ನು ಕರೆಸಿ ನಿಯೋಜಿಸಲಾಗುತ್ತಿದೆ. 4 ಕಂಟ್ರೋಲ್ ರೂಂ, 78 ಕಾವಲು ಗೋಪುರ, 164 ಮಹಿಳಾ ಸಹಾಯ ಡೆಸ್ಕ್ ಮತ್ತು 55 ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅದಕ್ಕೆ ಸಿದ್ದರಾಮಯ್ಯ ಅವರು, ನಿಯೋಜನೆಗೊಳ್ಳುತ್ತಿರುವ ಪೊಲೀಸರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಬೇಕು. ಚೆನ್ನಮ್ಮ ಪಡೆಗಳನ್ನು ಸಕ್ರಿಯವಾಗಿ ನಿಯೋಜಿಸಬೇಕು. ಕಿಡಿಗೇಡಿಗಳ ಮೇಲೆ ನಿರಂತರವಾಗಿ ನಿಗಾ ಇರಿಸಬೇಕು. ವ್ಹೀಲಿಂಗ್ ಮಾಡುವುದು ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಮಾದ ದ್ರವ್ಯ ಸೇವೆನೆ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಲೋಪ ಉಂಟಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಚಿವ ಡಾ. ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಡಿಜಿ-ಐಜಿ ಡಾ. ಎಂ.ಎಂ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಇತರರಿದ್ದರು.