ಹುಬ್ಬಳ್ಳಿ:
ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಆಡಳಿತ ಯಂತ್ರದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.ಅವರು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಪದವಿ ಕಿತ್ತಾಟ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಈ ವರಿಗೂ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಇಷ್ಟೊತ್ತಿಗೆ ಕಾಂಗ್ರೆಸ್‌ನ ಹೈಕಮಾಂಡ್ ಸ್ಪಷ್ಟವಾದ ಸೂಚನೆ ನೀಡಬೇಕಿತ್ತು ಎಂದರು.
ದೃಢ ನಿರ್ಧಾರ ತೆಗೆದುಕೊಳ್ಳಲಿ:ಐದು ವರ್ಷಗಳ ವರೆಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ ಎಂಬ ಸ್ಪಷ್ಟ ನಿರ್ದೇಶನ ನೀಡಬೇಕಿತ್ತು. ಹಾಗಾಗದೇ ಅವರ ಹೈಕಮಾಂಡಿನಿಂದಲೇ ಅವರ ಕೈ ಕಟ್ಟಿಹಾಕುವ ಕೆಲಸವಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಅತಂತ್ರ ಸರ್ಕಾರವಾಗಲಿದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗಡುತ್ತಾ ಸಾಗುತ್ತದೆ. ಆಂತರಿಕ ಕಲಹಗಳು ಹೆಚ್ಚಾಗಿ ಸರ್ಕಾರಕ್ಕೆ ತೊಂದರೆಯಾಗಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಈ ಬಗ್ಗೆ ದೃಢವಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಹೈಕಮಾಂಡ್ ಮುಂದೆ ಹೇಳಲಿ:ರಾಜ್ಯ ಸರ್ಕಾರವು ಒಂದು ಉಪಮುಖ್ಯಮಂತ್ರಿ ಇರುವುದನ್ನು ಈಗ ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿಸಿ ಎಂಬ ಕೂಗು ಹೆಚ್ಚಾಗಿ ಕೇಳಿಬರುತ್ತಿತ್ತು. ಈಗ ಮುಖ್ಯಮಂತ್ರಿ ಬದಲಾವಣೆಯಾಗಲಿ ಎನ್ನುವ ಗೊಂದಲದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಯಾರ ಮನಸಲ್ಲಿ ಏನಿದೆ ಎನ್ನುವುದನ್ನು ಬೇರೆಯವರಿಂದ ಹೇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಏನು ಹೇಳಬೇಕು ಎನ್ನುವುದನ್ನು ಅವರ ಹೈಕಮಾಂಡ್ ಮುಂದೆ ಹೇಳಬೇಕು ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ಗೆ ಶೆಟ್ಟರ ಟಾಂಗ್ ನೀಡಿದರು.
ಸಿಎಂ ಗದ್ದಿಗೆಗೆ ಗುದ್ದಾಟ:ನಾನು ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದರೂ ಕೂಡ ಈ ಬಗ್ಗೆ ಗೊತ್ತಾಗಿರಲಿಲ್ಲ. ಮುಖ್ಯಮಂತ್ರಿ ಹುದ್ದೆಗಾಗಿ ಮೊದಲಿನಿಂದಲೂ ಗುದ್ದಾಟ ಇದ್ದೇ ಇದೆ. ಅದು ಈಗಲೂ ಮುಂದುವರಿದಿದೆ. ಬಿಜೆಪಿ ಆಪರೇಷನ್ ಕಮಲ ಮಾಡುವುದು ಬೇಕಾಗಿಲ್ಲ, ಕಾಂಗ್ರೆಸ್‌ನ ಒಳ ಬೇಗುದಿ, ಶಾಸಕರ ಅಸಮಾಧಾನವೇ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂದರು.
ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ:ಗ್ಯಾರಂಟಿ ಯೋಜನೆಗಳಿಂದ ಲೋಕಸಭಾ ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಕಾಂಗ್ರೆಸ್ಸಿನವರು ತಿಳಿದುಕೊಂಡಿದ್ದರು. ಆದರೆ, ಹಾಗಾಗಲಿಲ್ಲ. ಈಗ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ವಾಪಾಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಈ ಗ್ಯಾರಂಟಿ ಅನುಷ್ಠಾನಕ್ಕಾಗಿ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ. ಸರ್ಕಾರ ವರಮಾನ ಹೆಚ್ಚಿಸಿಕೊಳ್ಳಲು ಪೆಟ್ರೋಲ್, ಡೀಸೆಲ್, ಹಾಲು, ಬಸ್ ಪ್ರಯಾಣ ದರ ಹೆಚ್ಚಳ ಮಾಡುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರು, ಬಡವರು ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನೆಲ್ಲ ವಿಚಾರ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ನಿರ್ಧಾರ ತಗೆದುಕೊಳ್ಳುವುದು ಸೂಕ್ತ ಎಂದರು.