ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲಿನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಉದ್ಘಾಟನೆ ಹಾಗೂ ವಚನ ದರ್ಶನ ಮಿಥ್ಯ ವಿರುದ್ಧ ಸತ್ಯ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕೆಲವು ಲಿಂಗಾಯತ ಮಠಾಧೀಶರನ್ನು ಬಳಸಿಕೊಂಡು ಆರ್.ಎಸ್.ಎಸ್ ಬಸವಾದಿ ಶರಣರ ವಚನಗಳ ಸಮಾನತೆಯ ಆಶಯವನ್ನು ಹಾಗೂ ಸಮಾಜ, ಧಾರ್ಮಿಕ ಸುಧಾರಣೆ ನಿಲುವುಗಳನ್ನು ಅಲ್ಲಗಳೆದು ವಚನ ದರ್ಶನ ಪುಸ್ತಕ ಬರೆಸಿದೆ. ಶರಣರ ಅನುಭಾವದಲ್ಲಿ ಮೂಡಿದ ವಚನಗಳನ್ನು ವೇದ ಮತ್ತು ಉಪನಿಷತ್ ಗಳ ಕನ್ನಡೀಕರಣ ಎಂದು ನಿರಾಧಾರ ಹಾಗೂ ಕುಚೋದ್ಯದ ಪ್ರತಿಪಾದನೆ ಮಾಡುತ್ತಿದ್ದಾರೆ. ಅನುಭವ ಮಂಟಪವೇ ಇರಲಿಲ್ಲ ಎಂದು ವೀಣಾ ಬನ್ನಂಜೆ, ಅನುಭವ ಮಂಟಪ ಇತ್ತು, ಆದರೆ ಶೂನ್ಯಪೀಠ ಇರಲಿಲ್ಲ ಎಂದು ಸುಬ್ಬಾರಾವ್ ಎನ್ನುವವರು ಹೇಳುತ್ತಾರೆ.ಈ ಎಲ್ಲ ಸುಳ್ಳುಗಳನ್ನು ಬಯಲುಗೊಳಿಸಲು ಫ.ಗು. ಹಳಕಟ್ಟಿಯವರು ಸಂಪಾದಿಸಿ ಕೊಟ್ಟ ಶರಣರ ವಚನಗಳಿವೆ. ಲಿಂಗಾಯತರು ಈಗ ಓದಿಕೊಂಡಿದ್ದಾರೆ. ಹಿಂದೆ ಪದೆ ಪದೇ ಸುಳ್ಳು ಹೇಳಿ ನಂಬಿಸಿದಂತೆ, ಈಗ ನಂಬಿಸಲಾಗದು. ಆರ್.ಎಸ್.ಎಸ್ ಗೆ ತಕ್ಕ ಉತ್ತರ ಕೊಡುವುದಕ್ಕಾಗಿಯೇ ಬಹು ಹಿಂದೆ ಡಿ.ಸಿ. ಪಾವಟೆ, ಹಿರೇಮಲ್ಲೂರು ಈಶ್ವರನ್, ಜಿ.ಎಸ್. ಶಿವರುದ್ರಪ್ಪ, ಚಂಪಾ, ಎಂ.ಎಸ್. ಹುಣಶ್ಯಾಳ, ನೀಲಗಂಗಯ್ಯ ಪೂಜಾರ ಮತ್ತಿತರರು ಬರೆದ ಲೇಖನಗಳನ್ನು ಸಂಪಾದಿಸಿ ಈ ಪುಸ್ತಕ ತಂದಿದ್ದೇವೆ. ರಾಜ್ಯದ ಪ್ರಮುಖ ಜಿಲ್ಲೆಗಳು ಸೇರಿ ೧೮ಕ್ಕೂ ಅಧಿಕ ಕಡೆ ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತೇವೆ ಎಂದು ಹೇಳಿದರು.
ಪುಸ್ತಕದ ಸಂಪಾದಕ ಟಿ.ಆರ್. ಚಂದ್ರಶೇಖರ ಮಾತನಾಡಿ, ಲಿಂಗಾಯತ ಧರ್ಮದ ಮೇಲೆ, ಬಸವಣ್ಣನ ಮೇಲೆ ಬ್ರಾಹ್ಮಣ್ಯದ ದಾಳಿಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಲಿಂಗಾಯತ ಮಠಗಳಲ್ಲಿರುವ ಕುಂಕುಮಧಾರಿಗಳ ದಾಳಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಬಸವ ತಾಲಿಬಾನಿಗಳು ಎನ್ನುವ ಕನ್ಹೇರಿ ಶ್ರೀಗಳ ಹೇಳಿಕೆ, ಬಸವಣ್ಣ ಹೊಳೆ ಹಾರಿದ ಎನ್ನುವ ಯತ್ನಾಳರ ಕುಹಕ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ‍್ಯರ ಭಾವಚಿತ್ರವಿರಬೇಕು ಎನ್ನುವ ಬಿದರಿಯವರ ಸಲಹೆ ಇದೆಲ್ಲದರ ಹಿಂದೆ ಆರ್.ಎಸ್.ಎಸ್ ಇದೆ. ಇದು ಬಸವಾದಿ ಶರಣರ ತಾತ್ವಿಕತೆಯನ್ನು ಗೌಣವಾಗಿಸುವ, ಭ್ರಷ್ಟಗೊಳಿಸುವ ಕುತಂತ್ರ ಎಂದು ಆರೋಪಿಸಿದರು.
೧೨ನೇ ಶತಮಾನದಲ್ಲಿ ಬಸವಾದಿ ಶರಣರು ನೂರಾರು ವಚನಗಳಲ್ಲಿ ವೇದಾಗಮ, ವರ್ಣಾಶ್ರಮ ತಿರಸ್ಕರಿಸಿದ್ದಾರೆ. ವೇದ ನಡ ನಡುಗಿತ್ತು ಏಕೆಂದರೆ ಕೂಡಲಸಂಗಮದೇವನು ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿ ಉಂಡ ಕಾರಣಕ್ಕೆ ಎನ್ನುವ ಬಸವಣ್ಣನವರ ನಿಲುವು ವೇದಗಳ ವಿಚಾರವಾಗಿ ಸ್ಪಷ್ಟವಾಗಿದೆ. ಆದರೂ ಮತ್ತೆ ಮತ್ತೆ ವಚನಕಾರರನ್ನು ತಿರುಚುವ, ತಪ್ಪಾಗಿ ಅರ್ಥೈಸುವ ಹುನ್ನಾರ ಏಕೆ ? ಎಂದು ಪ್ರಶ್ನಿಸಿದರು.ಸಾನ್ನಿಧ್ಯ ವಹಿಸಿದ್ದ ಗುರು ಮಹಾಂತ ಶ್ರೀ ಮಾತನಾಡಿ, ಲಿಂಗಾಯತರಿಗೆ ಬಸವಣ್ಣ ಧರ್ಮಗುರು. ವಚನ ಸಾಹಿತ್ಯ ಧರ್ಮಗ್ರಂಥ, ವಚನ ಸಮ್ಮತ ನಿಜಾಚರಣೆಗಳನ್ನು ರೂಢಿಸಿಕೊಂಡು, ಮೌಢ್ಯದಿಂದ ಹೊರಬನ್ನಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬರಗುಂಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕರ‍್ಯರ‍್ಶಿ ಮಹಾಂತೇಶ ಪಾಟೀಲ ಮಾತನಾಡಿದರು.ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಪ್ರಧಾನ ಕಾರ್ಮಿಕ ರವಿ ಯಡಹಳ್ಳಿ, ಇಳಕಲ್ಲ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಬೆಳವಣಿಕಿ, ಹುನಗುಂದ ತಾಲೂಕು ಘಟಕದ ಅಧ್ಯಕ್ಷ ಎಸ್.ಆರ್. ಕಡಿವಾಲ, ಹುನಗುಂದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಾ ಭಾವಿಕಟ್ಟಿ, ಗುಳೆದಗುಡ್ಡ ತಾಲೂಕು ಘಟಕದ ಅಧ್ಯಕ್ಷ ರಾಚಪ್ಪ ಕೆರೂರ, ಜಮಖಂಡಿ ತಾಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಬಾಂಗಿ ಪಾಲ್ಗೊಂಡಿದ್ದರು.