ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಸಾಹಿತ್ಯವಾರ ಆಚರಣೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡುವುದಲ್ಲದೆ, ಕನ್ನಡ ಸಾಹಿತ್ಯ ಮತ್ತು ಕನ್ನಡ ಕವಿಗಳ ಇತಿಹಾಸದ ಪರಿಚಯವಾಗುತ್ತದೆ. ಭಾರತದ ಇತರೆ ಭಾಷೆಗಳಿಗಿಂತ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದ್ದು, ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ರಾಜ್ಯೋತ್ಸವ ದಿನದಂದು ಕನ್ನಡ ತಾಯಿ ಶ್ರೀ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಅಲಂಕೃತ ಬೆಳ್ಳಿರಥದಲ್ಲಿರಿಸಿ ಸಾಂಸ್ಕೃತಿಕ ಕಲಾತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ಏರ್ಪಡಿಸಬೇಕು. ಮೆರವಣಿಗೆಯಲ್ಲಿ ಸರ್ಕಾರದ 5 ಗ್ಯಾರಂಟಿಗಳ ಜೊತೆಗೆ ಜಿಲ್ಲಾ ಪಂಚಾಯತ್, ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಆಹಾರ, ಮೀನುಗಾರಿಕೆ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ, ಶಿಕ್ಷಣ, ಪಶುವೈದ್ಯಕೀಯ, ರೇಷ್ಮೆ ಇಲಾಖೆಗಳ ಪ್ರಸ್ತುತ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯುಳ್ಳ ಉತ್ತಮ ಸ್ತಬ್ಧಚಿತ್ರಗಳನ್ನು ಸೃಜನಾತ್ಮಕವಾಗಿ ರೂಪಿಸಬೇಕು ಎಂದು ನಿರ್ದೇಶಿಸಿದರು.ಮೆರವಣಿಗೆಯಲ್ಲಿ ಕಡ್ಡಾಯವಾಗಿ ಎಲ್ಲಾ ಇಲಾಖಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಹಾಗೂ ಜಿಲ್ಲೆಯ ಹೆಸರಾಂತ ಸಾಹಿತಿ ಹಾಗೂ ಕವಿಗಳ ಭಾವಚಿತ್ರದೊಂದಿಗೆ ಸಮಾಜಮುಖಿ ಚಿಂತನೆಯುಳ್ಳ ಅವರ ಬರಹದ ಸಾಲುಗಳ ಘೋಷ ವಾಕ್ಯಗಳ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೂ ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದವರ ಪರಿಚಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಲಿದ್ದಾರೆ. ಧ್ವಜಸ್ತಂಭ, ಗೌರವರಕ್ಷೆ ಸ್ವೀಕಾರ ಸೇರಿದಂತೆ ಕಾರ್ಯಕ್ರಮ ನಡೆಸಲು ಅಗತ್ಯ ವೇದಿಕೆ, ಗಣ್ಯರಿಗೆ ಆಸನ ವ್ಯವಸ್ಥೆ, ಅಲಂಕಾರಿಕ ಹೂಕುಂಡಗಳ ವ್ಯವಸ್ಥೆ, ನಾಡಗೀತೆಯ ಗಾಯನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಅಧಿಕಾರಿಗಳು/ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಸಮಿತಿಯ ಮೂಲಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿ, ಪಟ್ಟಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ನಿರ್ದೇಶಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು/ ಅಧೀನ ಅಧಿಕಾರಿಗಳು/ಸಿಬ್ಬಂದಿಗಳು ತಪ್ಪದೇ ಹಾಜರಾಗಲು ಸೂಚಿಸಿದರು. ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮನಮೋಹನ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋನಿಯಾ ವರ್ಣೇಕರ್ ಉಪಸ್ಥಿತರಿದ್ದರು.