
ಮಡಿಕೇರಿ: ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾ ನೀರು ಮತ್ತು ನೈರ್ಮಲ್ಯ ಅಭಿಯಾನ ಸಮಿತಿ ಸಭೆಯು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ಸಂಬಂಧ ಚರ್ಚಿಸಲಾಯಿತು. ಎಸ್‍ಡಿಪಿ ಮತ್ತು ನಾನ್ ಎಸ್‍ಡಿಪಿ ಯೋಜನೆಯನ್ನು ಮಾರ್ಪಡಿಸಿ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಜಲಜೀವನ್ ಮಿಷನ್ ಯೋಜನಾ ಕಾಮಗಾರಿಗಳ ಕುಂದುಕೊರತೆ ಸಂಬಂಧಿಸಿದಂತೆ ಆನಂದ ಪ್ರಕಾಶ್ ಮೀನಾ ಮಾಹಿತಿ ಪಡೆದರು. ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಇದುವರೆಗೆ ಕಡಿಮೆ ಮಳೆಯಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಜಲಜೀವನ್ ಮಿಷನ್ 2.0 ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ವಿವರಿಸಿದರು. ಸಭೆಯಲ್ಲಿ ತುರ್ತು ಕುಡಿಯುವ ನೀರಿನ ಬಗ್ಗೆ, ವಿಶೇಷ ಅಭಿವೃದ್ಧಿ ಕಾರ್ಯಕ್ರಮ, ಜಲಜೀವನ್ ಮಿಷನ್ ಯೋಜನೆಗಳ ಕಾಮಗಾರಿ, ಡಿಸಿನ್ಫೆಕ್ಷನ್ ಯೂನಿಟ್, ಹರ್‍ಘರ್‍ಜಲ್ ವಿಷಯ, ನೀರಿನ ಗುಣಮಟ್ಟ ಪರೀಕ್ಷೆ ಹಾಗೂ ಇಎಫ್‍ಐ ಮತ್ತು ಇ.ಒ.ಟಿಗಳ ಕುರಿತು ಚರ್ಚಿಸಲಾಯಿತು.
ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯ ಜವಾಹರ್ ನವೋದಯ ಶಾಲೆಗೆ 78.50 ಲಕ್ಷ ರು. ವೆಚ್ಚದಲ್ಲಿ ಹೊಸ ನೀರು ಶುದ್ಧಿಕರಣ ಘಟಕ ನಿರ್ಮಾಣದ ಆಡಳಿತಾತ್ಮಕ ಅನುಮೋದನೆಗೆ ಚರ್ಚೆ ನಡೆಸಲಾಯಿತು. ವಾಟರ್ ಬಜೆಟ್, 20 ಓವರ್ ಹೆಡ್ ಟ್ಯಾಂಕ್‍ಗಳ ದುರಸ್ತಿ ಮತ್ತು ಕಂಪ್ಯೂಟರ್ ಆಪರೇಟರ್ ಹಾಗೂ ಡ್ರೈವರ್-ಸಿಬ್ಬಂದಿ ಮುಂದುವರಿಕೆ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ.ಪಿ.ವಿರೇಂದ್ರ, ತಾಲೂಕು ಆರೋಗ್ಯಧಿಕಾರಿ ಡಾ.ಸನತ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಪುಟ್ಟಸ್ವಾಮಿ ಸಹಿತ ಅಧಿಕಾರಿಗಳು ಹಾಜರಿದ್ದರು.