ಗದಗ: ದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ರಕ್ಷಣೆಗಾಗಿ ಶ್ರದ್ಧಾ ಕೇಂದ್ರಗಳು ಶ್ರಮಿಸುತ್ತಿವೆ. ಈ ದೆಸೆಯಲ್ಲಿ ಈ ಭಾಗದ ಕೊಟ್ಟೂರೇಶ್ವರ ಮಠವು ಜನರ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇಶದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಘಟಕದ ಕಾರ್ಯದರ್ಶಿ ರವಿ ದಂಡಿನ ತಿಳಿಸಿದರು.ತಾಲೂಕಿನ ಹರ್ಲಾಪುರ ಕೊಟ್ಟೂರೇಶ್ವರ ಮಠದ 138ನೇ ಜಾತ್ರಾ ಮಹೋತ್ಸವ ಹಾಗೂ ಪುರಾಣ ಪ್ರಾರಂಭೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರ ಜೀವನಕ್ಕೆ ನೆಮ್ಮದಿ ಬೇಕೆಂದರೆ ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿದ್ದು ಮಠ, ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದರು.ಅಡ್ನೂರ, ಗದಗ ಮಠದ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಹಠಯೋಗಿ ಕೊಟ್ಟೂರೇಶ್ವರ ಪುರಾಣ ಗ್ರಂಥವು ಮೌಲ್ಯಯುತವಾಗಿದ್ದು, ಇದರಲ್ಲಿ ಕೊಟ್ಟೂರೇಶ್ವರರ ಜೀವನ ಚರಿತ್ರೆಯ ಮಾರ್ಗಗಳು ಜೀವನಕ್ಕೆ ದಾರಿದೀಪವಾಗಿವೆ ಎಂದರು.ಮಲ್ಲಸಮುದ್ರದ ಓಂಕಾರೇಶ್ವರ ಮಠದ ಫಕೀರೇಶ್ವರ ಮಠದ ಶ್ರೀಗಳು ಮಾತನಾಡಿ, ಇಂದಿನ ವೈಜಾನಿಕ ಯುಗದಲ್ಲಿ ಧರ್ಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರು ಕ್ಷೀಣಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಕೊಟ್ಟೂರೇಶ್ವರ ಮಠವು ತಮ್ಮ ಧಾರ್ಮಿಕ ವಿಶೇಷ ಕಾರ್ಯಕ್ರಮಗಳೊಂದಿಗೆ ಜನರಲ್ಲಿ ಧಾರ್ಮಿಕ ಮನೋಭಾವ ತುಂಬುತ್ತಿರುವುದು ಶ್ಲಾಘನಿಯ ಎಂದರು. ಸಾನಿಧ್ಯ ವಹಿಸಿದ್ದ ಕೊತಬಾಳದ ಗಂಗಾಧರ ಸ್ವಾಮಿಗಳು, ಮಹಾಲಿಂಗಪುರದ ಚನ್ನವೀರ ಶ್ರೀಗಳು ಮಾತನಾಡಿದರು. ಪುರಾಣ ಪ್ರವಚನಕಾರ ಕೀರ್ತನ ಕೇಸರಿ ಗುರುನಾಥ ಶಾಸ್ತ್ರೀಗಳು ಹಠಯೋಗಿ ಕೊಟ್ಟೂರೇಶ್ವರರ ಪುರಾಣವನ್ನು ಆರಂಭಿಸಿ ಕೊಟ್ಟೂರೇಶ್ವರರ ಸಂಕ್ಷಿಪ್ತ ಚರಿತ್ರೆಯನ್ನು ವಿವರಿಸಿದರು.
ಡಾ. ಕೊಟ್ಟೂರೇಶ್ವರ ಶ್ರೀಗಳು, ಗುರುಶಿದ್ದೇಶ್ವರ ಶ್ರೀಗಳು, ಫಕೀರಯ್ಯಸ್ವಾಮಿ ಹರ್ತಿಮಠ, ಉಮೇಶ ಮಲ್ಲಾಪೂರ, ಅಶೋಕ ಬ್ಯಾಹಟ್ಟಿ, ಮಲ್ಲಪ್ಪ ಕುರಿ, ಬಸವರಾಜ ಗೊರವರ, ಆನಂದ ಹಂಚಿನಾಳ ಇದ್ದರು. ಕೆ.ಬಿ. ವೀರಾಪೂರ, ಮಂಜುನಾಥ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಕೆ.ಆರ್. ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಸಿ. ಸರ್ವಿ ಸ್ವಾಗತಿಸಿದರು. ವೆಂಕಟೇಶ ಜುಂಜಣ್ಣಿ ನಿರೂಪಿಸಿದರು. ಶಿಕ್ಷಕ ಕೆ.ಬಿ. ಕೊಣ್ಣೂರು ವಂದಿಸಿದರು.