ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನ ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಭವ್ಯವಾಗಿ ನೆರವೇರಿತು. ದಿನವಿಡೀ ಸುಮಾರು 10 ದಿವ್ಯ ಬಲಿಪೂಜೆಗಳು ನಡೆದು ಪುಣ್ಯಕ್ಷೇತ್ರವು ಸಂಪೂರ್ಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.
ದಿನದ ಪ್ರಮುಖ ಸಾಂಭ್ರಮಿಕ ಬಲಿಪೂಜೆಯನ್ನು ಅಲಹಬಾದ್ ಧರ್ಮಪ್ರಾಂತ್ಯದ ವಂ.ಲುವಿಸ್ ಮಸ್ಕರೇನ್ಹಸ್ ಅರ್ಪಿಸಿ, ಬಡವರೇ ಕ್ರಿಸ್ತನ ಪ್ರತಿರೂಪವಾಗಿದ್ದು ಅವರೊಂದಿಗೆ ಕ್ರೈಸ್ತ ಜೀವನ ಸರಿದೂಗಿ ನಡೆಯಬೇಕು ಎಂದು ಸಂದೇಶ ನೀಡಿದರು. ವಿವಿಧ ಯಾಜಕರ ಸಹಭಾಗಿತ್ವದಲ್ಲಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಭಕ್ತಿಕಾರ್ಯಗಳು ನಡೆದವು.ಅತ್ತೂರು ಪುಣ್ಯಕ್ಷೇತ್ರದಲ್ಲಿ ವಿವಿಧ ಧರ್ಮದ ಭಕ್ತರು ಭಾಗವಹಿಸಿ ಮೊಂಬತ್ತಿ ಬೆಳಗಿಸಿ, ಹರಕೆ ಸಲ್ಲಿಸಿ ಆಶೀರ್ವಾದ ಪಡೆದರು. ಗಣ್ಯರ ಉಪಸ್ಥಿತಿ, ವೈಭವಯುತ ವಿದ್ಯುತ್ ಅಲಂಕಾರ ಮತ್ತು ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರ ಸಂಭ್ರಮದಿಂದ ಈ ಮಹೋತ್ಸವವು ಧಾರ್ಮಿಕ ಭಕ್ತಿ, ಸಾಮಾಜಿಕ ಸಂದೇಶ ಮತ್ತು ಜನೈಕ್ಯತೆಯ ಪ್ರತೀಕವಾಗಿ ಮೂಡಿಬಂತು.