-ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ
ಪುರಸಭೆಯಲ್ಲಿ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಳಿಕೆ ಇರುವ 31 ಅಂಗಡಿಗಳನ್ನು ಮರು ಹರಾಜು ಮಾಡಲು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪ್ರಕ್ರಿಯೆ ಆರಂಭಿಸಬೇಕು. ಇದರಲ್ಲಿ ಕುವೆಂಪು ವಾಣಿಜ್ಯ ಮಳಿಗೆಯನ್ನು ಸೇರಿಸುವಂತೆ ಪುರಸಭಾ ಸದಸ್ಯರಾದ ಅಶ್ವಥ್ ಹಾಗೂ ರಂಗಹನುಮಯ್ಯ ಒತ್ತಾಯಿಸಿದರು.ಇನ್ನೊಂದು ತಿಂಗಳ ಒಳಗಾಗಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮೀಸಲಾತಿಯೊಂದಿಗೆ ಹರಾಜು ಪ್ರಕ್ರಿಯೆಗೆ ತರಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಬಾಲಕೃಷ್ಣ ಮಾತನಾಡಿ, 10 ಎಕರೆ ಗೋಮಾಳ ಜಾಗ ಗುರುತಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಘನ ತ್ಯಾಜ್ಯ ಘಟಕ ಸ್ಥಳಾಂತಿರಿಸಿ ಎಲ್ಲಾ ರೀತಿಯ ಯಂತ್ರಗಳನ್ನು ಬಳಸಿ ಘನ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಸಲಾಗುವುದು ಎಂದರು.
ಕರ ವಸೂಲಿ ಮಾಡದಿದ್ದರೆ ಸಂಬಳ ಕಟ್: ಪುರಸಭೆ ನಿರ್ವಹಣೆ ಮಾಡಲು ಅಧಿಕಾರಿಗಳು ಕರ ವಸೂಲಿಗೆ ಹೆಚ್ಚಿನ ಒತ್ತು ಕೊಡಬೇಕು. ಯಾವ ಅಧಿಕಾರಿ ಗುರಿಯನ್ನು ತಲುಪುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ಕಟ್ ಮಾಡಬೇಕು. ಒಂದು ವೇಳೆ ಮುಖ್ಯಾಧಿಕಾರಿಗಳು ಅಧಿಕಾರಿಗಳಿಂದ ಕೆಲಸ ಸರಿಯಾಗಿ ಮಾಡಿಸದಿದ್ದರೆ ಮುಖ್ಯಾಧಿಕಾರಿಗಳ ಸಂಬಳ ಕಟ್ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ. ಪಟ್ಟಣ ನಿರ್ವಹಣೆಗೆ ಕರ ವಸೂಲಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಪತ್ರಿಕಾ ಭವನ, ಕನ್ನಡ ಭವನಕ್ಕೆ ನಿವೇಶನ: ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮತ್ತು ಕನ್ನಡ ಭವನಕ್ಕೆ ನಿವೇಶನ ನೀಡಲು ಸದಸ್ಯರು ಸಭೆಯಲ್ಲಿ ಒಪ್ಪಿಗೆ ಸೂಚಿದರು. ಶಾಸಕ ಬಾಲಕೃಷ್ಣ ಪಟ್ಟಣದ ಗುಂಡಯ್ಯನ ಬಾವಿ ಸಮೀಪ ಪತ್ರಿಕಾ, ಕನ್ನಡ ಭವನ ನಿವೇಶನ ನೀಡಲು ತೀರ್ಮಾನಿಸಿದರು.
ಪಟ್ಟಣದ 8 ಮತ್ತು 9 ನೇ ವಾರ್ಡನಲ್ಲಿ ಅಂಗನವಾಡಿ ಇಲ್ಲ, ಇದರ ಬಗ್ಗೆ ಗಮನ ಹರಿಸುವಂತೆ ಆಶಾರಾಣಿ ಮತ್ತು ಅಶ್ವಥ್ ಮನವಿ ಮಾಡಿದರು. ಶಾಸಕರು ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಅಂಗನವಾಡಿ ಕೇಂದ್ರ ತೆರೆಯಲು ಸೂಚಿಸಿ, ಇನ್ನೂ ಯಾವ್ಯಾವ ವಾರ್ಡ್‌ಗಳಲ್ಲಿ ಅಂಗನವಾಡಿ ಇಲ್ಲ, ಅದನ್ನು ಗಮನಕ್ಕೆ ತಂದರೆ ಅಂಗನವಾಡಿ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ ವಹಿಸಿದ್ದರು. ಉಪಾಧ್ಯಕ್ಷ ರಿಯಾಜ್, ಮುಖ್ಯ ಅಧಿಕಾರಿ ಶಿವರುದ್ರಯ್ಯ ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.