ಕನ್ನಡಪ್ರಭ ವಾರ್ತೆ ಬೆಂಗಳೂರು ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್, ಬೆಂಗಳೂರು ನೂತನ ಕಚೇರಿಯನ್ನು ಆಸ್ಟ್ರೇಲಿಯಾದ ನಾಗರಿಕತ್ವ, ಕಸ್ಟಮ್ಸ್ ಮತ್ತು ಬಹುಸಂಸ್ಕೃತಿ ವ್ಯವಹಾರಗಳ ಸಹಾಯಕ ಸಚಿವ ಜುಲಿಯನ್ ಹಿಲ್ ಹಾಗೂ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶುಕ್ರವಾರ ಉದ್ಘಾಟಿಸಿದರು. ಈ ನೂತನ ಕಚೇರಿಯು ಕರ್ನಾಟಕ ಮಾತ್ರವಲ್ಲದೇ ತೆಲಂಗಾಣ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಡ ರಾಜ್ಯಗಳೊಂದಿಗಿನ ವ್ಯವಹಾರಗಳನ್ನು ನೋಡಿಕೊಳ್ಳಲಿದೆ.ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ನೂತನ ಕಚೇರಿಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜುಲಿಯನ್ ಹಿಲ್, ದಕ್ಷಿಣ ಭಾರತದ ರಾಜ್ಯಗಳೊಂದಿಗೆ ಆಸ್ಟ್ರೇಲಿಯಾದ ಸಹಭಾಗಿತ್ವ ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲಾಗಿದೆ. ಆರ್ಥಿಕ, ಶೈಕ್ಷಣಿಕ, ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡು ರಾಷ್ಟ್ರಗಳನ್ನು ಮತ್ತಷ್ಟು ಹತ್ತಿರಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ನಗರದಲ್ಲಿ ಆಸ್ಟ್ರೇಲಿಯಾದ 40ಕ್ಕೂ ಹೆಚ್ಚು ಕಂಪನಿಗಳು ನೆಲೆಯೂರಿವೆ. ಜಾಗತಿಕ ಹೂಡಿಕೆದಾರರ ಸಮಾವೇಶ, ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, ಸ್ಪೇಸ್ ಎಕ್ಸ್ಪೋ ಮುಂತಾದವುಗಳಲ್ಲಿ ಪಾಲ್ಗೊಳ್ಳುತ್ತಿದೆ. ಅಲ್ಲಿನ ಕ್ವೀನ್ಸ್‌ಲ್ಯಾಂಡ್ ಮತ್ತು ವಿಕ್ಟೋರಿಯಾ ಪ್ರಾಂತ್ಯಗಳ ಕಚೇರಿಗಳು ಬೆಂಗಳೂರಿನಲ್ಲೂ ತಮ್ಮ ವಾಣಿಜ್ಯ ವಹಿವಾಟು ಕಚೇರಿಗಳನ್ನು ಹೊಂದಿವೆ ಎಂದರು.
ಕಾನ್ಸುಲೇಟ್ ಜನರಲ್ ಕಚೇರಿ ಆರಂಭದಿಂದ ನಮ್ಮ ದ್ವಿಪಕ್ಷೀಯ ಬಾಂಧವ್ಯವು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಮುಂದುವರಿಯಲಿದೆ. ಆಸ್ಟ್ರೇಲಿಯಾದಿಂದ ಹೂಡಿಕೆ, ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ನಾವೀನ್ಯತೆಯ ಪರಿಚಯ ಕೂಡ ಹೆಚ್ಚಳವಾಗುವ ಭರವಸೆ ಇದೆ ಎಂದು ಹೇಳಿದರು.ಭಾರತದಲ್ಲಿರುವ ಆಸ್ಟ್ರೇಲಿಯನ್ ಹೈಕಮಿಷನರ್ ಫಿಲಿಫ್ ಗ್ರೀನ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬು ಗೋಯಲ್, ಬೆಂಗಳೂರಿನಲ್ಲಿರುವ ಕಾನ್ಸುಲ್ ಜನರಲ್ ಹಿಲರಿ ಮೆಗಿಚಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.