ಬೆಂಗಳೂರು ರೈಲ್ವೆ ಪರೀಕ್ಷೇಲಿ ಕನ್ನಡಕ್ಕೆ ಅಧಿಕಾರಿಗಳ ಕೊಕ್‌

KannadaprabhaNewsNetwork |  
Published : Dec 18, 2025, 04:15 AM ISTUpdated : Dec 18, 2025, 06:14 AM IST
Railway

ಸಾರಾಂಶ

  ನೈಋತ್ಯ ರೈಲ್ವೆ  ಬಡ್ತಿ ಪರೀಕ್ಷೆಗಳಲ್ಲಿ ಕರ್ನಾಟಕದ ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗಗಳಲ್ಲಿ ಕನ್ನಡದಲ್ಲೂ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ನೀಡಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಷ್ಟೇ ಪರೀಕ್ಷೆ ಬರೆಯಬೇಕೆಂತೆ

 ಮಯೂರ್‌ ಹೆಗಡೆ 

 ಬೆಂಗಳೂರು :  ಬೆಂಗಳೂರು ಕರ್ನಾಟಕದಲ್ಲಿಲ್ವೇ?ಇಂಥದ್ದೊಂದು ಪ್ರಶ್ನೆ ಹುಟ್ಟಲು ಕಾರಣ ನೈಋತ್ಯ ರೈಲ್ವೆ ವಲಯದ ಧೋರಣೆ. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯಾಪ್ತಿಯಲ್ಲಿ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ (ಎಲ್‌ಡಿಸಿಇ) ಅಂದರೆ ಬಡ್ತಿ ಪರೀಕ್ಷೆಗಳಲ್ಲಿ ಕರ್ನಾಟಕದ ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗಗಳಲ್ಲಿ ಕನ್ನಡದಲ್ಲೂ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ನೀಡಿದೆ. 

ಆದರೆ, ಬೆಂಗಳೂರಿನಲ್ಲಿ ಮಾತ್ರ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಷ್ಟೇ ಪರೀಕ್ಷೆ ಬರೆಯಬೇಕೆಂತೆ!ಏಕೆ, ಬೆಂಗಳೂರಿನಲ್ಲಿ ಕನ್ನಡಿಗರಿಲ್ಲವೇ? ಅಥವಾ ನೈಋತ್ಯ ರೈಲ್ವೆಯು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶದಂತೆ ಕಾಣುತ್ತಿದೆಯೇ ಎಂಬ ಪ್ರಶ್ನೆ ಇದೀಗ ಕನ್ನಡಪರ ಹೋರಾಟಗಾರರಿಂದ ಕೇಳಿಬಂದಿದೆ.

ಬಡ್ತಿ ಪರೀಕ್ಷೆ:

ಕಳೆದ ಡಿ.11ರಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು 317 ಸರಕು ಸಾಗಣೆ ರೈಲಿನ ವ್ಯವಸ್ಥಾಪಕ ಹುದ್ದೆಗೆ ಪರೀಕ್ಷಾ ಅಧಿಸೂಚನೆ ಹೊರಡಿಸಿದೆ. ಟ್ರೈನ್‌ ಕ್ಲರ್ಕ್‌, ಶಂಟಿಂಗ್‌ ಮಾಸ್ಟರ್‌, ಪಾಯಿಂಟ್ಸ್‌ಮನ್‌, ಟಿಕೆಟ್‌ ತಪಾಸಣಾಕಾರರು, ವಾಣಿಜ್ಯ ಸಹಾಯಕ ಹುದ್ದೆಗಳಲ್ಲಿರುವವರು, ಮೂರು ವರ್ಷ ಸೇವಾವಧಿ ಪೂರೈಸಿದವರು ಈ ವ್ಯವಸ್ಥಾಪಕ ಹುದ್ದೆ ಪರೀಕ್ಷೆಗೆ ಅರ್ಜಿ ಹಾಕಬಹುದು. ಪರೀಕ್ಷೆ ದಿನಾಂಕ ಬಳಿಕ ನಿಗದಿಯಾಗಲಿದೆ. ಪರೀಕ್ಷೆಯು ಕಂಪ್ಯೂಟರ್‌ ಆಧಾರಿತ ಲಿಖಿತವಾಗಿ ನಡೆಯಲಿದೆ.

ಬೆಂಗಳೂರಲ್ಲಿ ಯಾಕಿಲ್ಲ?:

ಇದೇ ಹುದ್ದೆಗೆ ಮೈಸೂರು, ಹುಬ್ಬಳ್ಳಿ ವಿಭಾಗದಲ್ಲಿ ಕ್ರಮವಾಗಿ 56 ಮತ್ತು 101 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಬಹುಆಯ್ಕೆ ಉತ್ತರ ಮಾದರಿಯಲ್ಲಿ ಪರೀಕ್ಷೆ ನಡೆಯುತ್ತದೆ. ಇಲ್ಲಿ ತ್ರಿಭಾಷೆಗೆ ಅಂದರೆ ಇಂಗ್ಲಿಷ್‌, ಹಿಂದಿ ಹಾಗೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಆದರೆ ಬೆಂಗಳೂರು ವಿಭಾಗದಲ್ಲಿ ಮಾತ್ರ ದ್ವಿಭಾಷೆ ಅಂದರೆ ಇಂಗ್ಲಿಷ್‌-ಹಿಂದಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟು ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂಬುದು ಪರೀಕ್ಷಾರ್ಥಿಗಳ ಅಳಲು.ಈ ವಿಭಾಗದಲ್ಲಿ 15 ದಿನಗಳ ಹಿಂದೆ ನಡೆದ ಸ್ಟೇಷನ್ ಮಾಸ್ಟರ್‌ ಹುದ್ದೆ ಪರೀಕ್ಷೆ ಸೇರಿ ಹಿಂದಿನ ಇನ್ನೆರಡು ಪರೀಕ್ಷೆಗಳಲ್ಲೂ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ಇರಲಿಲ್ಲ ಎಂದು ನೊಂದ ಅಭ್ಯರ್ಥಿಗಳು ದೂರಿದ್ದಾರೆ.

ಮಂಡಳಿ ಆದೇಶ ಉಲ್ಲಂಘನೆ?:

ರೈಲ್ವೆ ಮಂಡಳಿಯು 2019ರ ಡಿ.19ರಂದು ಹೊರಡಿಸಿರುವ ಸುತ್ತೋಲೆ 31ರ ಎಂಸಿ31 ಪ್ರಕಾರ ಗ್ರೂಪ್‌ ‘ಸಿ’ ನೌಕರರನ್ನು ಮುಂಬಡ್ತಿಗೆ ಆಯ್ಕೆ ಮಾಡುವಾಗ ಪ್ರಾದೇಶಿಕ ಅಂದರೆ ರಾಜ್ಯದ ಅಧಿಕೃತ ಭಾಷೆಯಲ್ಲೆ ಪರೀಕ್ಷೆ ನಡೆಸಬೇಕು ಎಂಬ ಸೂಚನೆ ಇದೆ. ಆದರೆ ನೈಋತ್ಯ ರೈಲ್ವೆ ವಲಯದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗಳಲ್ಲಿ ಈ ನಿಯಮ ಪದೇಪದೆ ಉಲ್ಲಂಘನೆ ಆಗುತ್ತಿದೆ ಎಂದು ರೈಲ್ವೆ ನೌಕರರ ಸಂಘಟನೆಯೊಂದು ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಿಗರಿಗೆ ಬಡ್ತಿ ಬೇಡ್ವೆ?:

ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾತನಾಡಿ, ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡಲು ಇಂಥ ಕಣ್ಣಾಮುಚ್ಚಾಲೆ ಆಡಲಾಗುತ್ತದೆ. ಕಡಿಮೆ ಹುದ್ದೆಗೆ ಕರೆದ ವಿಭಾಗಗಳಲ್ಲಿ ಕನ್ನಡಕ್ಕೆ ಅವಕಾಶ ಕೊಟ್ಟು, ಹೆಚ್ಚಿನ ಹುದ್ದೆಗಳಲ್ಲಿ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ ಎಂಬುದರ ಔಚಿತ್ಯವೇನು? ರೈಲ್ವೆ ಕೆಳ ಹುದ್ದೆಗಳಲ್ಲೇ ಕನ್ನಡಿಗರು ಮುಂದುವರಿಯಬೇಕೇ? ಉತ್ತರ ಭಾರತದವರಿಗೆ ಇಂಗ್ಲಿಷ್‌ ಜ್ಞಾನ ಅಷ್ಟೇನೂ ಇರಲ್ಲ, ಆದರೆ, ಹಿಂದಿಯಲ್ಲಿ ಪರೀಕ್ಷೆ ಬರೆದು ಲಾಭ ಪಡೆಯುತ್ತಾರೆ. ಆದರೆ, ಕನ್ನಡಿಗರು ತಾಂತ್ರಿಕ ಜ್ಞಾನವಿದ್ದರೂ ಮಾತೃಭಾಷೆಯಲ್ಲಿ ಉತ್ತರಿಸುವ ಹಕ್ಕಿಲ್ಲದೆ ವಂಚಿತರಾಗುತ್ತಿದ್ದಾರೆ. ಬಡ್ತಿ ತಪ್ಪಿಹೋಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಸಂಬಂಧಿಸಿದ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕಂಪ್ಯೂಟರ್ ಆಧರಿತವಾಗಿ ನಡೆಯುವ ಪರೀಕ್ಷೆಗಳಲ್ಲಿ ಹಿಂದಿ-ಇಂಗ್ಲಿಷ್‌ ಮಾತ್ರವಿದೆ ಎಂದು ತಿಳಿಸಿದ್ದಾರೆ, ಪರಿಶೀಲಿಸಿ ತಿಳಿಸುವುದಾಗಿ ಉತ್ತರಿಸಿದ್ದಾರೆ.

 ಸಾಕಷ್ಟು ಹೋರಾಟ ಮಾಡಿಯೂ, ಕನ್ನಡದಲ್ಲಿ ಪರೀಕ್ಷೆಗೆ ಆದೇಶವಿದ್ದರೂ ಕೂಡ ಉಲ್ಲಂಘಿಸುತ್ತಾರೆ ಎಂದರೆ ಅರ್ಥವೇನು? ಭಾರತ ಒಕ್ಕೂಟದಲ್ಲಿ ಕನ್ನಡಿಗರು ಇರುವ ಇಷ್ಟವಿಲ್ಲವೇ? 

- ಅರುಣ್ ಜಾವಗಲ್‌, ಕನ್ನಡಪರ ಹೋರಾಟಗಾರ 

ಸೂಚನೆಗೂ ಕಿಮ್ಮತ್ತಿಲ್ಲ

ಕಳೆದ ವರ್ಷ ಸಹಾಯಕ ಲೊಕೋಪೈಲೆಟ್‌ ಹುದ್ದೆಗಳಿಗೆ ಸಂಪೂರ್ಣ ನೈಋತ್ಯ ವಲಯದಲ್ಲಿ ಹಿಂದಿ-ಇಂಗ್ಲಿಷ್‌ನಲ್ಲಿ ಮಾತ್ರ ಅವಕಾಶ ಕೊಟ್ಟು ಕನ್ನಡಿಗರಿಗೆ ಅನ್ಯಾಯವಾಗಿತ್ತು. ಆಗ ‘ಕನ್ನಡಪ್ರಭ’ ವರದಿಗೆ ಸ್ಪಂದಿಸಿ ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟು ಕನ್ನಡದಲ್ಲೇ ಪರೀಕ್ಷೆ ನಡೆಸಲು ಆದೇಶಿಸಿದ್ದರು. ಬಳಿಕ ಕೆಲ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಿದ್ದ ಇಲಾಖೆ ಈಗ ಮತ್ತೆ ಕನ್ನಡದಲ್ಲಿ ಪರೀಕ್ಷೆ ಬರೆವ ಅವಕಾಶ ಕಿತ್ತುಕೊಂಡಿದೆ. ಅದರಲ್ಲೂ ಬೆಂಗಳೂರು ಕೇಂದ್ರಿತ ವಿಭಾಗದಲ್ಲೇ ಇದು ಪುನಾವರ್ತನೆ ಆಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ