ದೊಡ್ಡಬಳ್ಳಾಪುರ: ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳಿಗೆ ತ್ವರಿತವಾಗಿ ಸ್ಪಂದಿಸಿ ಸೂಕ್ತ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ನೊಂದವರಿಗೆ ಸಕಾಲದಲ್ಲಿ ವಿಳಂಬವಿಲ್ಲದೆ ಪರಿಹಾರ ಧನ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಹೇಳಿದರು.
ಪೊಲೀಸ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಮೂಲಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವ ಪ್ರಯತ್ನ ಮಾಡಬೇಕು. ದೌರ್ಜನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸಿಸಬೇಕು ಎಂದರು.
11 ದೌರ್ಜನ್ಯ ಪ್ರಕರಣ ದಾಖಲು:ಅಕ್ಟೋಬರ್ 1 ರಿಂದ ಇಲ್ಲಿಯವರೆಗೂ ಒಟ್ಟು 11 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿ 11 ಪ್ರಕರಣಗಳಲ್ಲಿ ನೊಂದ 20 ಸಂತ್ರಸ್ತರಿಗೆ ಒಟ್ಟು ₹5.85 ಲಕ್ಷ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಹಂಚಿಕೆ:ನಗರ ಪ್ರದೇಶಗಳಲ್ಲಿ ನಿವೇಶನ, ಮನೆ ಒದಗಿಸಲು ಮೊದಲ ಆದ್ಯತೆಯಾಗಿ ಸಫಾಯಿ ಕರ್ಮಚಾರಿಗಳನ್ನು ಪರಿಗಣಿಸಲಾಗುವುದು ಮನೆಗಳಿಲ್ಲದೆ ಇರುವ ಸಫಾಯಿ ಕರ್ಮಚಾರಿಗಳಿಗೆ ನಿವೇಶನವನ್ನು ಶೀಘ್ರವಾಗಿ ಒದಗಿಸಲಾಗುವುದು. ಅವರ ಕುಟುಂಬಗಳಿಗೆ ವ್ಯಾಪಾರ, ವ್ಯವಹಾರಕ್ಕಾಗಿ ವಿವಿಧ ಕೌಶಲ್ಯ ತರಬೇತಿ, ಮಾರ್ಗದರ್ಶನ ನೀಡಿ ಸರ್ಕಾರದಿಂದ ಸಿಗುವಂತಹ ಸಾಲ ಸೌಲಭ್ಯ ಕಲ್ಪಿಸಿ ಕೆಲಸಕ್ಕೆ ಬೇಕಾಗುವ ಅಗತ್ಯ ಪರಿಕರಗಳನ್ನು ಅವರಿಗೆ ಒದಗಿಸುವುದರ ಜೊತೆಗೆ ವೇತನ ಪಾವತಿಯಲ್ಲಿ ವಿಳಂಬವಾಗದಂತೆ ಕ್ರಮ ವಹಿಸಿ ಎಂದರು.
ಜಿಲ್ಲಾ ಪೋಲಿಸ್ ವರಷ್ಠಾಧಿಕಾರಿ ಸಿ.ಕೆ ಬಾಬಾ ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು. ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಸಾಮಾಜಿಕ ನ್ಯಾಯದ ಮುಖ್ಯ ಉದ್ದೇಶವಾಗಿರುತ್ತದೆ ಹಾಗಾಗಿ ದೌರ್ಜನ್ಯವಾದರೆ ಅಥವಾ ದೌರ್ಜನ್ಯ ಕಂಡು ಬಂದರೆ ಯಾವುದೇ ರೀತಿಯ ಭಯ ಪಡದೇ ದೂರು ನೀಡಿದರೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಿ ರಕ್ಷಣೆ ನೀಡಿ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುತ್ತದೆ ಎಂದರು.ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಟಿಎಲ್‌ಎಸ್ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜಾಗೃತಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
17ಕೆಡಿಬಿಪಿ1-ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ 4ನೇ ತ್ರೈಮಾಸಿಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.