ಹುಬ್ಬಳ್ಳಿ: ಮಳೆಗಾಲದ ಸಮಯದಲ್ಲಿ ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ. ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ಶಾಸಕ ಅಬ್ಬಯ್ಯ ಪ್ರಸಾದ ಕಿವಿಮಾತು ಹೇಳಿದರು.
ಬುಧವಾರ ಸರ್ಕ್ಯೂಟ್ ಹೌಸ್‌ನಲ್ಲಿ ಹುಬ್ಬಳ್ಳಿ ಶಹರದಲ್ಲಿನ ಮಳೆ ಹಾನಿ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಪಾರ ಪ್ರಮಾಣದ ಮಳೆಯಿಂದಾಗಿ ಸಾವಿರಾರು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಳೆಯಿಂದ ಸಾಕಷ್ಟು ಜನರ ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ಒದಗಿಸಲಾಗುತ್ತಿದೆ. ಹಳೇ ಹುಬ್ಬಳ್ಳಿ ವೃತ್ತದ ರಸ್ತೆ ದುರಸ್ತಿಗೊಳಿಸಬೇಕಿದೆ ಎಂದರು.
ಪರಿಸ್ಥಿತಿ ಅವಲೋಕಿಸಿ: ಅಧಿಕಾರಿಗಳು ಕಚೇರಿ ಬಿಟ್ಟು ಪರಿಸ್ಥಿತಿ ಅವಲೋಕಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಪಾಲಿಕೆಯ ವಾರ್ಡ್ ವಾರು ಚರಂಡಿಗಳ ಸ್ವಚ್ಛತೆ, ವಾತಾವರಣ ಕಲುಷಿತ ನಿರ್ಮಾಣವಾಗದಂತೆ ಜಾಗೃತಿ ವಹಿಸಬೇಕು. ಆರೋಗ್ಯ ನಿರೀಕ್ಷಕರೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಉಣಕಲ್ ಕೆರೆಯಿಂದ ಗಬ್ಬೂರು ವರೆಗೆ ಹರಿಯುವ ರಾಜಕಾಲುವೆ ಸ್ವಚ್ಛ ಮಾಡಬೇಕು. ಜನರು ತ್ಯಾಜ್ಯವನ್ನು ಕಾಲುವೆಗೆ ಎಸೆಯದಂತೆ ಸೂಚನೆ ನೀಡಬೇಕು. ರಾಜ ಕಾಲುವೆ ತಡೆಗೋಡೆಗಳನ್ನು ಎತ್ತರಿಸುವ ಕುರಿತು ಗಮನ ಹರಿಸಿ ಒತ್ತುವರಿಯನ್ನೂ ತೆರವುಗೊಳಿಸಲಾಗುವುದು ಎಂದರು.ನಗರದ ಬಹಳಷ್ಟು ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳನ್ನು ತೆರೆದಿದ್ದು, ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಕೂಡಲೇ ಪರಿಶೀಲಿಸಿ ಮುಚ್ಚಬೇಕು ಎಂದು ಸೂಚನೆ ನೀಡಿದರು.
ಮಾಹಿತಿ ಸಂಗ್ರಹಿಸಿ: ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿದ್ದರೆ ಮಾಹಿತಿ ಸಂಗ್ರಹಿಸಿ ನೀಡಿ. ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರೀಕ್ಷಿತವಾಗಿಲ್ಲ. ಗುಣಮಟ್ಟದ ಶಿಕ್ಷಣ ನೀಡುವತ್ತ ಶಿಕ್ಷಣ ಇಲಾಖೆ ಮುಂದಾಗಬೇಕಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಪೊಲೀಸರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು.ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಎಸ್‌ಡಿಆರ್‌ಎಫ್ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ರಸ್ತೆಗಳ ದುರಸ್ತಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇಸಿಗೆ ಅವಧಿಯಲ್ಲೇ ಚರಂಡಿ, ನಾಲೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಸ್ವಚ್ಛಗೊಳಿಸದಿರುವುದು ಗಮನಕ್ಕೆ ಬಂದಿದೆ. ಶೀಘ್ರ ಸ್ವಚ್ಛತೆಗೆ ಗಮನಹರಿಸಬೇಕು. ನಗರದಲ್ಲಿ ಮೇಲ್ಸೆತುವೆ ಕಾಮಗಾರಿ ಸುಗಮವಾಗಿ ಸಾಗುತ್ತಿದೆ. ಹೊಸೂರು ವೃತ್ತದಿಂದ ವಿಜಯಪುರ ರಸ್ತೆವರೆಗಿನ ಕಾಮಗಾರಿ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಸುಮಾರು 1188 ಮನೆಗಳಿಗೆ ಮಳೆ ನೀರು ನುಗ್ಗಿದೆ. 16 ಮನೆಗಳು ಬಿದ್ದಿವೆ. 3 ಮನೆಗಳಿಗೆ ಶೇ. 50ರಷ್ಟು ಹಾನಿಯಾಗಿದೆ. ಮ್ಯಾನ್‌ಹೋಲ್‌ಗಳನ್ನು ನಾಳೆ ಸಂಜೆಯೊಳಗೆ ಮುಚ್ಚಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.ಪ್ರೋಬೇಷನರಿ ಅಧಿಕಾರಿ ರಿತಿಕಾ ವರ್ಮಾ, ತಹಸೀಲ್ದಾರ ಕಲಗೌಡ ಪಾಟೀಲ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ, ಪಾಲಿಕೆಯ ಸಹಾಯಕ ಆಯುಕ್ತ ವಿಜಯಕುಮಾರ್, ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಟಿ. ಪ್ರದೀಪ, ಲೋಕೋಪಯೋಗಿ ಇಲಾಖೆಯ ಎಇಇ ಎಚ್.ಜಿ. ಗುಂಡಳ್ಳಿ, ವಲಯ ಸಹಾಯಕ ಆಯುಕ್ತರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.