ನರಸಿಂಹರಾಜಪುರವಿದ್ಯಾರ್ಥಿಗಳು ಉತ್ತಮ ಪುಸ್ತಕ ಓದುವುದರಿಂದ ಕ್ರಿಯಾಶೀಲತೆ, ಜ್ಞಾನ ಹೆಚ್ಚಾಗಲಿದೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಪೂರ್ಣಿಮ ತಿಳಿಸಿದರು.
ಕಸಾಪ ದಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ವಿದ್ಯಾರ್ಥಿಗಳು ಉತ್ತಮ ಪುಸ್ತಕ ಓದುವುದರಿಂದ ಕ್ರಿಯಾಶೀಲತೆ, ಜ್ಞಾನ ಹೆಚ್ಚಾಗಲಿದೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಪೂರ್ಣಿಮ ತಿಳಿಸಿದರು.
ಮಂಗಳವಾರ ಅಳಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿನಿಯರಾದ ಎಚ್.ಪಿ.ಅನ್ವಿನಿ, ಆರ್.ಅನೀಷಾ, ಎಂ.ಎಚ್.ಸಿಂಚನಾಗೆ ಕನ್ನಡ ಕಣ್ಮಣಿ- ಪ್ರತಿಭಾ ಪುರಸ್ಕಾರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಭಾಷಾ ಜ್ಞಾನ ಪಡೆಯಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಇಂಗ್ಲೀಷ್, ಕನ್ನಡ ಹಾಗೂ ಗಣಿತದಲ್ಲಿ ಸಂಪೂರ್ಣ ಹಿಡಿತ ಇದ್ದರೆ ಡಿಸ್ಟಿಂಕ್ಷನ್ ಪಡೆಯಬಹುದು.ಈ ವರ್ಷ ನಮ್ಮ ಮೊರಾರ್ಜಿ ಶಾಲೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿದ್ದು ಜಿಲ್ಲೆಗೆ 2 ನೇ ಸ್ಥಾನ ಪಡೆದಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಸಾಪದಿಂದ ಕಳೆದ ವರ್ಷವೂ ಕನ್ನಡ ದಲ್ಲಿ ಪೂರ್ಣಾಂಕ ಪಡೆದ ಮಕ್ಕಳನ್ನು ಸನ್ಮಾನಿಸಿದ್ದೇವೆ. ಶಿಕ್ಷಕರಿಗೆ ಪ್ರಭಂದ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ನೀಡಲಾಗಿದೆ. ಪ್ರತಿಯೊಬ್ಬ ಮಕ್ಕಳು ಉತ್ತಮ ಸಂಸ್ಕಾರ ಪಡೆಯಬೇಕು. ಮುಂದಿನ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆಯಬೇಕು ಎಂದು ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ 111 ವರ್ಷದ ಇತಿಹಾಸ ಇದೆ. ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಮುಖ ಪಾತ್ರ ವಹಿಸುತ್ತದೆ. ಮುಂದಿನ ದಿನಗಳಲ್ಲಿ ಉದಯೋನ್ಮುಖ ಬರಹಗಾರರಿಗೆ ತರಬೇತಿ ನೀಡುವ ಹಮ್ಮಿಕೊಳ್ಳಲಾಗುವುದು ಎಂದರು.
ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಮಾತನಾಡಿ, ರಾಜ್ಯದ ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲೇ ಮಾತನಾಡಬೇಕು.ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡದಲ್ಲಿ ಮಹಾನ್ ಗ್ರಂಥ ಗಳಿದ್ದು ಪ್ರತಿಯೊಬ್ಬರೂ ಕನ್ನಡ ಪುಸ್ತಕಗಳನ್ನು ಓದಬೇಕು. ತಾಲೂಕು ಕಸಾಪ ಎಸ್.ಎಸ್.ಎಲ್.ಸಿ.ಯಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಅತಿಥಿಯಾಗಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಿಥುನ್ ಗೌಡ ಮಾತನಾಡಿ, ಜೇಸಿ ಸಂಸ್ಥೆಯಿಂದ ಪ್ರತಿ ವರ್ಷ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ತರಬೇತಿ ನಡೆಸುತ್ತಾ ಬಂದಿದ್ದೇವೆ. ತರಬೇತಿ ಪಡೆದ ಮಕ್ಕಳು ಹೆಚ್ಚು ಅಂಕ ಪಡೆಯಬೇಕು ಎಂಬುದೇ ಜೇಸಿ ಸಂಸ್ಥೆ ಉದ್ದೇಶ. ಮುಂದಿನ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ ಪ್ರತಿಯೊಬ್ಬ ಮಕ್ಕಳೂ 125 ಕ್ಕೆ 125 ಅಂಕ ಪಡೆಯಬೇಕು ಎಂದು ಸಲಹೆ ನೀಡಿದರು. ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಪ್ರೇರಣ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಪೂರ್ಣಿಮ ಅವರನ್ನು ಕಸಾಪದಿಂದ ಗೌರವಿಸಲಾಯಿತು.
ಸಭೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹ ಶಿಕ್ಷಕರಾದ ಮಹಾತ್ಮಾ ಗಾಂಧಿ, ಇಮ್ತಿಯಾಜ್, ರಾಮಮೋಹನ್, ಪೂಜಾ ಜೈನ್, ಅನುಸೂಯ, ಸುಚಿತ್ರ, ಸುನೀತ,ಪವಿತ್ರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.