ಬಳ್ಳಾರಿ: ಜಿಲ್ಲೆಯ ಎಲ್ಲ ದೇವಾಲಯಗಳ ಭಕ್ತರ ಕಾಣಿಕೆ ಹುಂಡಿಗಳಿಗೆ ಸೂಕ್ತ ಭದ್ರತೆ ಒದಗಿಸಿ, 360 ಡಿಗ್ರಿ ಸಿಸಿಟಿವಿ ನಿಗಾ ವ್ಯವಸ್ಥೆ ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್. ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವಸ್ಥಾನಗಳ ಹುಂಡಿ ಭದ್ರತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 713 ದೇವಾಲಯಗಳಲ್ಲಿ ಈಗಾಗಲೇ 354 ದೇವಾಲಯಗಳ ಮಾನಿಟರಿಂಗ್ ಪೂರ್ಣಗೊಂಡಿವೆ. ಉಳಿದ ದೇವಾಲಯಗಳಲ್ಲೂ ಶೀಘ್ರವೇ ನಿಗಾ ವ್ಯವಸ್ಥೆ ಅಳವಡಿಸಬೇಕು ಎಂದರು.ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಬೇಕು. ಕಳ್ಳತನ ಹಾಗೂ ಇತರೆ ಅಕ್ರಮಗಳನ್ನು ತಡೆಯಲು ಡಿಜಿಟಲ್ ರೂಪದಲ್ಲಿ ಕಾಣಿಕೆ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಳ್ಳಾರಿಯ ಪ್ರಸಿದ್ಧ ಕನಕದುರ್ಗಮ್ಮ ದೇವಸ್ಥಾನದಲ್ಲಿ ಸಿಸಿಟಿವಿ ಮಾನಿಟರಿಂಗ್ ಕಾಮಗಾರಿ ಏಳು ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ದೇವಾಲಯಗಳ ಸೂಕ್ತ ಸ್ಥಳಗಳಲ್ಲಿ ಎಲ್ಲರಿಗೂ ಗೋಚರಿಸುವ ರೀತಿಯಲ್ಲಿ ಹುಂಡಿಗಳನ್ನು ಅಳವಡಿಸಿ ಭದ್ರತೆ ಹೆಚ್ಚಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ 5 ಎ ವರ್ಗ, 5 ಬಿ ವರ್ಗ ಹಾಗೂ 703 ಸಿ ವರ್ಗ ಸೇರಿ ಒಟ್ಟು 713 ದೇವಾಲಯಗಳಿವೆ. ಎಲ್ಲೆಡೆ ಭದ್ರತಾ ವ್ಯವಸ್ಥೆ ಬಲಪಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಸರ್ಕಾರಿ ನೌಕರರಿಗೆ ಮಾತ್ರ ಅವಕಾಶ ನೀಡಬೇಕು. ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ರಚಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ಸಂಬಂಧಿತ ಅಧಿಕಾರಿಗಳು ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಯಿತು.
ಹುಂಡಿ ಎಣಿಕೆ ವೇಳೆ ಕಳ್ಳತನದಂತಹ ಪ್ರಕರಣಗಳು ಕಂಡುಬಂದರೆ ಸಂಬಂಧಿತ ದೇವಾಲಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್ಚರಿಸಿದರು.