ವಸತಿ ಶಾಲೆಗಳಲ್ಲಿ ಸಹಾಯವಾಣಿ ದೊಡ್ಡದಾಗಿ ಬರೆಸಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಸೂಚನೆ
ವಸತಿನಿಲಯಗಳಲ್ಲಿ ಒಂದೆಡೆ ಎಲ್ಲರಿಗೂ ಗೋಚರಿಸುವಂತೆ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ್ನು ದೊಡ್ಡದಾಗಿ ಬರೆಸಬೇಕು. ಪೋಕ್ಸೋ ಮತ್ತು ಬಾಲ್ಯ ವಿವಾಹ ಕುರಿತಂತೆ ನೀತಿ ಶಿಕ್ಷಣ ಹೇಳಬೇಕು. ಮುಖ್ಯವಾಗಿ ಹೆಣ್ಣುಮಕ್ಕಳ ವಸತಿನಿಲಯಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ನಾಗಣ್ಣ ಗೌಡ ಸೂಚಿಸಿದರು.
ನಗರದ ಕೋಟೆ ಪ್ರದೇಶದ ಬಾಲಕಿಯರ ವಸತಿ ನಿಲಯ, ವಿದ್ಯಾನಗರದ ನಂದ ವಸತಿ ಶಾಲೆ, ಇಂದಿರಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ತಾಳೂರು ರಸ್ತೆಯ ಬಾಲಭಾರತಿ ಕೇಂದ್ರಿಯ ವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ತಿಳಿಸಿದರು.ಶಾಲೆ ಮತ್ತು ವಸತಿ ನಿಲಯಗಳಲ್ಲಿ ಗ್ರಾಮೀಣ ಭಾಗದಿಂದ ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆ. ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಪೂರಕ ವಾತಾವರಣ ಕಲ್ಪಿಸಬೇಕು. ಅವರಲ್ಲಿ ಶಿಕ್ಷಣದ ಬೇಸಾಯ ಕೈಗೊಳ್ಳಬೇಕು. ಮಕ್ಕಳ ಉತ್ತಮ ಜೀವನ ರೂಪಿಸಿಕೊಳ್ಳಲು ವಸತಿನಿಲಯಗಳು ಪೂರಕವಾಗಿದ್ದು, ಇಲ್ಲಿ ಅವರಿಗೆ ಸ್ನೇಹಮಯಿ ವಾತಾವರಣ ರೂಪಿಸಬೇಕು ಎಂದರು.
ವಸತಿನಿಲಯದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ, ಅಗತ್ಯ ಸಿಬ್ಬಂದಿ ನೇಮಕಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಿರಿ. ಈ ಕುರಿತು ಆಯುಕ್ತರ ಜೊತೆ ಚರ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಬಳಿಕ ವಿದ್ಯಾನಗರದ ನಂದ ವಸತಿ ಶಾಲೆಗೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸುವ ಸುತ್ತೋಲೆ ನಿಯಮಗಳನ್ವಯ ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಶಾಲೆಯಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗಳಾದ 1098 ಮತ್ತು 112 ಬರೆಸಬೇಕು. ಅಹವಾಲು ಪೆಟ್ಟಿಗೆಯನ್ನು ಸಿಸಿ ಟಿವಿ ಇರುವ ಜಾಗದಲ್ಲಿ ಅಳವಡಿಸಿ ಅವರಿಗೆ ದೂರು ನೀಡಲು ಭಯ ಪಡುವ ಹಾಗೆ ಮಾಡಬಾರದು. ಬೋಧನೆಗೆ ನೇಮಿಸಿಕೊಳ್ಳುವ ಶಿಕ್ಷಕರ ಅರ್ಹತೆ, ಸೇವಾನುಭಾವ ಹಾಗೂ ಅರ್ಹತೆಗಳು ಕಡ್ಡಾಯವಾಗಿರಬೇಕು. ಮುಖ್ಯವಾಗಿ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಕುರಿತು ಪೊಲೀಸ್ ಪರಿಶೀಲನೆಯಾಗಿರಬೇಕು ಎಂದು ಸೂಚಿಸಿದರು.
ಬಳಿಕ ಅಧ್ಯಕ್ಷರು ಇಂದಿರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ, ಅಲ್ಲಿನ ಶಾಲೆಯ ಮೈದಾನ ಸೂಕ್ತ ನಿರ್ವಹಣೆಗೆ ನಿರ್ದೇಶನ ನೀಡಿದರು. ಶಾಲೆಗಳನ್ನು ಪರೀಕ್ಷೆ ಮೌಲ್ಯಮಾಪನ, ಚುನಾವಣೆ ಮತ್ತು ಇತರೆ ಕಾರ್ಯಗಳಿಗಾಗಿ ಬಳಸಿಕೊಂಡಾಗ, ಮೂಲ ಸ್ಥಿತಿಯಲ್ಲಿದ್ದಂತೆಯೇ ಇರಬೇಕು ಎಂದು ಅವರಿಗೆ ತಿಳಿಸಬೇಕು, ಇದರಿಂದ ಶಾಲೆಗಳು ಅಂದಗೆಡುವುದಿಲ್ಲ ಮತ್ತು ಯಾವುದೇ ಶಾಲಾ ವಸ್ತುಗಳು ಹಾನಿಯಾಗುವುದಿಲ್ಲ ಎಂದರು.