ಕನ್ನಡಪ್ರಭ ವಾರ್ತೆ, ಮಂಡ್ಯರಾಜ್ಯದಲ್ಲಿ ಜಾತಿ ಗಣತಿಯನ್ನು ನಡೆಸಿ ಅದಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿ ಅಂತಿಮವಾಗಿ ಸಾಮಾಜಿಕ ನ್ಯಾಯ ವಿರೋಧಿಸುವ ಜಾತಿವಾದಿ ಷಡ್ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿಯುವುದರೊಂದಿಗೆ ಅಹಿಂದ ಸಮುದಾಯಕ್ಕೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ದಸಂಸ ಮುಖಂಡ ವೆಂಕಟಗಿರಿಯಯ್ಯ ಆರೋಪಿಸಿದರು.
ರಾಜ್ಯದ ಕೆಲವು ಜಾತಿವಾದಿಗಳ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್ ಮೂರು ತಿಂಗಳಲ್ಲಿ ಜಾತಿ ಜನಗಣತಿಯ ಮರು ಸಮೀಕ್ಷೆಗೆ ನಿರ್ದೇಶನ ನೀಡಿರುವುದು ಅವೈಜ್ಞಾನಿಕ. ಈ ಅವಾಸ್ತವಿಕ ನಿರ್ದೇಶನ ಜಾರಿಯಿಂದ ರಾಜ್ಯದ ಅಹಿಂದ ಸಮುದಾಯಕ್ಕೆ ಘೋರ ಅನ್ಯಾಯವಾಗಿದೆ ಎಂದು ಹೇಳಿದರು.ಎಚ್.ಕಾಂತರಾಜ್, ಜಯಪ್ರಕಾಶ ಹೆಗಡೆಯವರ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಜಾತಿ ಜನಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟವೇ ತಾತ್ವಿಕ ಒಪ್ಪಿಗೆ ನೀಡಿ ವಿಧಾನಮಂಡಲ ಮತ್ತು ಜನಸಾಮಾನ್ಯರ ನಡುವೆ ಚರ್ಚೆಗೂ ಅವಕಾಶ ನೀಡದೆ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಜಾತಿ ಜನಗಣತಿ ಮರುಸಮೀಕ್ಷೆಗೆ ಮುಂದಾಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ತಿಳಿಸಿದರು.ಸಂವಿಧಾನಾತ್ಮಕವಾದ ರಾಜ್ಯಸರ್ಕಾರ ಆಯೋಗದ ಘನತೆ, ಗೌರವದ ದೃಷ್ಟಿಯಿಂದಲಾದರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಜಾತಿಜನಗಣತಿ ವರದಿ ಗಂಭೀರ ಚರ್ಚೆಗೊಳಪಡಬೇಕಿತ್ತು. ಆದರೆ, ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರ, ವಿರೋಧಪಕ್ಷಗಳು ನೆಲದಲ್ಲಿಲ್ಲದ ಪರಿಣಾಮ ಅಹಿಂದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವುದನ್ನು ಮುಂದೂಡಿರುವುದು ಘೋರ ಅನ್ಯಾಯ ಮಾಡಿದಂತಾಗಿದೆ ಎಂದು ಟೀಕಿಸಿದರು.ಸುದ್ಧಿಗೋಷ್ಠಿಯಲ್ಲಿ ಬಿ.ಆನಂದ್, ಸುಶ್ಮಿತಾ, ಕೊತ್ತತ್ತಿ ಮಹದೇವ, ಸಂತೋಷ, ತಮ್ಮಣ್ಣ, ಎನ್.ಟಿ.ಮುತ್ತುರಾಜು ಇತರರಿದ್ದರು.