ಮುಂಡರಗಿ: ನಮ್ಮ ಮಕ್ಕಳಿಗೆ ಶಾಲಾ ಶಿಕ್ಷಣ ಯಶಸ್ವಿಯಾಗಬೇಕಾದರೆ ಗೃಹಶಿಕ್ಷಣ ಉತ್ತಮವಾಗಿರಬೇಕಾಗುತ್ತದೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ಹೊಣೆಗಾರಿಕೆ ತಂದೆ ತಾಯಂದಿರ ಮೇಲಿದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಹೇಳಿದರು.
ವಿಶ್ರಾಂತ ಶಿಕ್ಷಕರಾದ ಎಸ್.ಎಸ್. ಇನಾಮತಿ, ಡಿ.ಟಿ. ಪಾಟೀಲ ಹಾಗೂ ಕಾಯಕ ಯೋಗಿ ಪ್ರಶಸ್ತಿ ಪುರಸ್ಕೃತ ವೀರೇಶ ಹಡಗಲಿ ಅವರನ್ನು ಮಂಜುನಾಥ ಇಟಗಿ ಪರಿವಾರದಿಂದ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಎಸ್.ಎಸ್. ಇನಾಮತಿ ಮಾತನಾಡಿ, ಕೋಟೆಭಾಗ ಎಂದರೆ ಅದು ಮೂಲ ಹಳೆಯ ಮುಂಡರಗಿ. ಇಲ್ಲಿ ಎಲ್ಲ ಸಂಪ್ರದಾಯಗಳು ನಿರಂತವಾಗಿ ನಡೆಯುತ್ತಾ ಬಂದಿವೆ. ಇಲ್ಲಿ ಎಲ್ಲ ಜಾತಿ, ಜನಾಂಗದವರಿದ್ದರೂ ಎಲ್ಲರೂ ಒಂದಾಗಿ ಜಾತ್ರೆ, ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ. ದೊಡ್ಡಾಟ, ಸಣ್ಣಾಟ, ಬಯಲಾಟ, ಸಾಮಾಜಿಕ ನಾಟಕಗಳು, ಡೊಳ್ಳಿನ ಪದ, ಹಂತಿಪದಗಳು ಸೇರಿದಂತೆ ಅನೇಕ ಜನಪದಗಳ ತವರೂರು ಈ ಕೋಟೆ ಭಾಗವಾಗಿದೆ. ಇಲ್ಲಿ ವಾಸಿಸುವುದೇ ಒಂದು ಖುಷಿಯ ವಿಚಾರವಾಗಿದೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಈಗಾಗಲೇ ವೀರ ರಾಣಿ ಕಿತ್ತೂರು ಚೆನ್ನಮ್ಮಾಜಿ ಸಮುದಾಯ ಭವನದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅನೇಕರು ಧನಸಹಾಯ ಮಾಡಿದ್ದಾರೆ. ಉಳಿದವರೂ ಮುಂದೆ ಬರಬೇಕು ಎಂದರು.ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟೀನ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ಮನದಲ್ಲಿ ಚೆನ್ನಮ್ಮ ಇದು 6ನೇ ಕಾರ್ಯಕ್ರಮವಾಗಿದ್ದು, ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಪ್ರೋತ್ಸಾಹ ಸದಾ ಮುಂದುವರಿಯಲಿ ಎಂದರು.
ಮಂಜುನಾಥ ಇಟಗಿ, ಸಂಗೀತಾ ಇಟಗಿ, ಡಾ. ವಿ.ಕೆ. ಸಂಕನಗೌಡ್ರ, ಎನ್.ಎಂ. ಕುಕನೂರ, ರಮೇಶಗೌಡ ಪಾಟೀಲ, ರಾಜೇಶ ಅರ್ಕಲ್, ಸಿ.ಎಸ್. ಅರಸನಾಳ, ವೀರನಗೌಡ ಗುಡದಪ್ಪನವರ, ಅಶೋಕ ಹಂದ್ರಾಳ, ಎಂ.ಎಸ್. ಹೊಟ್ಟಿನ, ಶಿವಾನಂದ ಕಮತರ ಉಪಸ್ಥಿತರಿದ್ದರು. ಮಂಜುನಾಥ ಮುಧೋಳ ಸ್ವಾಗತಿಸಿದರು. ಶೋಭಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಲೀಲಾ ಉಮಚಗಿ ವಂದಿಸಿದರು.