ಕರ್ಜಗಿಯಲ್ಲಿ ಕಾರಹುಣ್ಣಿಮೆ ದೊಡ್ಡ ಬಂಡಿ ಸಂಭ್ರಮ

KannadaprabhaNewsNetwork |  
Published : Jun 19, 2025, 12:35 AM IST
18ಎಚ್‌ವಿಆರ್1 | Kannada Prabha

ಸಾರಾಂಶ

ಗ್ರಾಮದ ಬ್ರಹ್ಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಕಾರಹುಣ್ಣಿಮೆ ಹಬ್ಬದಲ್ಲಿ ಗ್ರಾಮದ 64 ಸಮುದಾಯದ ಜನರು ಸೌಹಾರ್ದತೆಯೊಂದಿಗೆ ಪಾಲ್ಗೊಂಡು ಹಬ್ಬ ಆಚರಿಸುವುದು ವಿಶೇಷವಾಗಿದೆ.

ಹಾವೇರಿ: ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ತಾಲೂಕಿನ ಕರ್ಜಗಿ ಗ್ರಾಮದ ಕಾರಹುಣ್ಣಿಮೆ ಎರಡನೇ ದಿನವಾದ ಬುಧವಾರ ದೊಡ್ಡ ಬಂಡಿ ಓಟ ಸಂಭ್ರಮದಿಂದ ಜರುಗಿತು. ಬಂಡಿಯ ಓಟ ನೋಡುವುದೇ ಕಣ್ಣಿಗೆ ಹಬ್ಬವಾಗಿದ್ದು, ಜಿಲ್ಲೆಯ ವಿವಿಧೆಡೆಯಿಂದ ಗ್ರಾಮಕ್ಕೆ ಆಗಮಿಸಿದ್ದ ಜನರು ಬಂಡಿಯ ಓಟ ಕಣ್ಣು ತುಂಬಿಕೊಂಡು ಸಂಭ್ರಮಿಸಿದರು. ಕರ್ಜಗಿ ಗ್ರಾಮದಲ್ಲಿ ನಡೆಯುವ ಬ್ರಹ್ಮಲಿಂಗೇಶ್ವರ ಜಾತ್ರೆಯ ಕಾರಹುಣ್ಣಿಮೆ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಅತ್ಯಾಕರ್ಷಕ ಅಲಂಕಾರಗೊಂಡ ಬಂಡಿಗಳು, ಸ್ಪರ್ಧೆಯೊಡ್ಡುವ ರೀತಿ ಭರದಿಂದ ಓಡುವ ಬಂಡಿಯ ಎತ್ತುಗಳು ಕರ್ಜಗಿ ಗ್ರಾಮದ ಕಾರಹುಣ್ಣಿಮೆಯ ವಿಶೇಷವಾಗಿದೆ. ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾರ ಹುಣ್ಣಿಮೆ ಹಬ್ಬ ಹಲವು ವಿಶಿಷ್ಟ ಸಂಪ್ರದಾಯಗಳ ಪ್ರಕಾರ ನಡೆಯುತ್ತಿದೆ. ಗ್ರಾಮದಲ್ಲಿ ಮಂಗಳವಾರ ಹೊನ್ನುಗ್ಗಿಯೊಂದಿಗೆ ಕಾರಹುಣ್ಣಿಮೆ ವೈಭವ ಪ್ರಾರಂಭಗೊಂಡಿದ್ದು, ನೇಗಿಲು ಮತ್ತು ವ್ಯವಸಾಯಕ್ಕೆ ಬಳಸುವ ಎಲ್ಲ ಸಾಮಗ್ರಿಗಳನ್ನು ಶೃಂಗರಿಸಿ ಪೂಜೆ ಸಲ್ಲಿಸಲಾಯಿತು. ಮನೆಯಲ್ಲಿ ಕರಿ ಕಂಬಳಿಯ ಗದ್ದುಗೆ ಮಾಡಿ ಎತ್ತನ್ನು ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಿ ಅದರ ಪಾದಕ್ಕೆ ಈ ವರ್ಷ ಮಳೆ- ಬೆಳೆ ಬಂಗಾರದಂತೆ ಬರಲಿ ಎಂದು ಹೊನ್ನು(ಬಂಗಾರ) ಮುಟ್ಟಿಸಿ ಪೂಜೆ ಮಾಡುವ ಮೂಲಕ ಹೊನ್ನುಗ್ಗಿ ಆಚರಿಸಲಾಯಿತು. ಎರಡನೇ ದಿನವಾದ ಬುಧವಾರ ಸಂಭ್ರಮದಿಂದ ದೊಡ್ಡ ಬಂಡಿ ನಡೆಯಿತು. ಈ ಬಂಡಿ ಓಟಕ್ಕಾಗಿ ರೈತರು ಬೆಳಗ್ಗೆಯಿಂದಲೇ ಎತ್ತು ಹಾಗೂ ಬಂಡಿಗಳಿಗೆ ಶೃಂಗರಿಸಿ ಸಿದ್ಧತೆ ಮಾಡಿದ್ದರು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಬಂಡಿ ಓಟ ರಾತ್ರಿ 8 ಗಂಟೆಯವರೆಗೂ ನಡೆಯಿತು. ವಿಶಿಷ್ಟ ವೇಷಗಳ ಮೂಲಕ ಗಮನ ಸೆಳೆದ ವೀರಗಾರರು, ಬಂಡಿಗಳನ್ನೇರಿ ಬಂಡಿ ಓಟಕ್ಕೆ ರಂಗು ಮೂಡಿಸಿದರು. ಬಂಡಿ ಓಟದ ಮುನ್ನ ಗ್ರಾಮದ ಆರಾಧ್ಯ ಬ್ರಹ್ಮಲಿಂಗೇಶ್ವರ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಂಗರಿಸಿದ ಎತ್ತುಗಳಿಗೆ ಹೂಡಿದ ಬಂಡಿಗಳನ್ನು ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ನಡೆದ ಬಂಡಿಯ ಓಟ ನೆರೆದ ಜನರನ್ನು ರೋಮಾಂಚಗೊಳಿಸಿತು. ಗ್ರಾಮದ ಬ್ರಹ್ಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಕಾರಹುಣ್ಣಿಮೆ ಹಬ್ಬದಲ್ಲಿ ಗ್ರಾಮದ 64 ಸಮುದಾಯದ ಜನರು ಸೌಹಾರ್ದತೆಯೊಂದಿಗೆ ಪಾಲ್ಗೊಂಡು ಹಬ್ಬ ಆಚರಿಸುವುದು ವಿಶೇಷವಾಗಿದ್ದು, ಜೂ. 19ರಂದು ಕರಕ್ಕಿ ಬಂಡಿ ಆಚರಿಸುವ ಮೂಲಕ ಕಾರ ಹುಣ್ಣಿಮೆ ಹಬ್ಬ ಸಂಪನ್ನಗೊಳ್ಳಲಿದೆ ಎಂದು ಗ್ರಾಮದ ಸರ್ವೇಶ ಡೊಂಕಣ್ಣನವರ ತಿಳಿಸಿದರು.ಇಂದು ಸಂಪನ್ನ...

ವರದಾ ನದಿ ತೀರದ ಕರ್ಜಗಿ ಗ್ರಾಮದಲ್ಲಿ ನಡೆಯುತ್ತಿರುವ ಕಾರಹುಣ್ಣಿಮೆ ಸಂಭ್ರಮ ಮನೆ ಮಾಡಿದ್ದು, ಜೂ. 19ರಂದು ಕರಕ್ಕಿ ಬಂಡಿ ಹಬ್ಬ ನಡೆಯಲಿದೆ. ಈ ಬಂಡಿಗೆ ಬುಧವಾರ ಹುಟ್ಟಿದ ಕರುವನ್ನು ಹೂಡುವುದು ಇಲ್ಲಿನ ವಿಶೇಷ. ಈ ಕಾರ್ಯಕ್ರಮ ಅಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗೂ ನಡೆಯುತ್ತದೆ. ಒಟ್ಟಾರೆ ಕರ್ಜಗಿ ಗ್ರಾಮದಲ್ಲಿ ನಡೆಯುತ್ತಿರುವ ಕಾರ ಹುಣ್ಣಿಮೆ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತಿದೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ