ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಸುಕ್ಷೇತ್ರ ಗಚ್ಚಿನ ಮಠದ ಸಭಾಂಗಣದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಶಿಕ್ಷಣ ಎಂಬುವುದು ಯಾರೂ ಕದಿಯಲಾರದ ಸಂಪತ್ತು. ಅದನ್ನು ಕಠಿಣ ಪರಿಶ್ರಮದಿಂದ ತಂದೆ-ತಾಯಿಯ ಆಶೀರ್ವಾದ ಮತ್ತು ಗುರುಗಳ ಮಾರ್ಗದರ್ಶನದಿಂದ ಪ್ರತಿಯೊಬ್ಬರೂ ಸಂಪಾದಿಸಬೇಕು. ಪಾಲಕರು ಮಕ್ಕಳಿಗಾಗಿ ಆಸ್ತಿ ಗಳಿಕೆ ಮಾಡುವುದಕ್ಕಿಂತ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.ಗ್ರಾಮೀಣ ಪ್ರದೇಶದ ವಿವಿಧ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅನೇಕ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮುದಾಯದ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಬಡಮಕ್ಕಳು ಈ ಯೋಜನೆಗಳು ಸದುಪಯೋಗ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ತಂದೆ-ತಾಯಿಗೆ ಹಾಗೂ ಸಮಾಜದ ಗೌರವ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಶಿಸ್ತು, ಸಮಯ ಪಾಲನೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಹೆಚ್ಚಿನ ಜ್ಞಾನ ಸಂಗ್ರಹಿಸುವ ಮೂಲಕ ನಿಮ್ಮ ಗುರಿ ಮುಟ್ಟಲು ಸಾಧ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇನ್ನಿತರ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಹಾಸ್ಟೆಲ್ ವ್ಯವಸ್ಥೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ ಸೇರಿದಂತೆ ಇನ್ನಿತರ ಸರ್ಕಾರದ ಲಾಭಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಸುಂದರವಾದ ಭವಿಷ್ಯ ಕಟ್ಟಿಕೊಳ್ಳಬೇಕು. ಇಂದು ನಿಮ್ಮ ಸಾಧನೆ ಗುರುತಿಸಿ ಗೌರವಿಸುತ್ತಿರುವ ಸಮಾಜಕ್ಕೆ ಋಣಿಯಾಗಿರಬೇಕು ಎಂದು ತಿಳಿಸಿದರು.ಗಚ್ಚಿನ ಮಠದ ಶಿವ ಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಅಟ್ಯಾ ಪಟ್ಯಾ ಕ್ರೀಡಾಕೂಟದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಕನ್ನಡ ನಾಡಿನ ಹಾಗೂ ಮಾದಿಗ ಸಮುದಾಯದ ಕೀರ್ತಿ ಹೆಚ್ಚಿಸಿದ ಅಥಣಿ ತಾಲೂಕಿನ ಅಗ್ರಾಣಿ ಇಂಗಳಗಾಂವ ಗ್ರಾಮದ ಬಸವರಾಜು ಕುಪೇಂದ್ರ ತಳಗಡೆ ಅವರನ್ನು ಈ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರು ಸನ್ಮಾನಿಸಿದರು.2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಅಥಣಿ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಎಐಸಿಸಿ ವೀಕ್ಷಕರು ಹಾಗೂ ಕೆಪಿಸಿಸಿ ಸಂಯೋಜಕರಾದ ಸುನಿತಾ ಐಹೊಳೆ, ಪುರಸಭೆ ಸದಸ್ಯರಾದ ವಿದ್ಯಾ ಐಹೊಳೆ, ರಾವಸಾಬ್ ಐಹೊಳೆ, ಸಮುದಾಯದ ಮುಖಂಡರಾದ ರಾಜೇಂದ್ರ ಐಹೊಳೆ, ಶಂಕರ ಪೂಜಾರಿ, ರಮೇಶ ಸಿಂದಗಿ, ಹನುಮಂತ ಅರ್ದವೂರ, ಮುರುಗೇಶ ಅಪ್ಪಾಜಿ, ರಾಜು ಹೆಗ್ಗನವರ, ಸದಾಶಿವ ದೊಡ್ಡಮನಿ, ಅನಿಲ ತಳವಾರ, ಸಂಗಪ್ಪ ಮಾಯನಟ್ಟಿ, ಕುಮಾರ ಗಸ್ತಿ, ಗಿರೀಶ್ ಬುಟಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಹನುಮಂತ ಅರ್ಧಾಯೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ವಾಘಮಾರೆ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಗಸ್ತಿ ವಂದಿಸಿದರು. ಸುವರ್ಣ ಸಾಧಕಿ ಪ್ರಶಸ್ತಿ ಪುರಸ್ಕೃತೆ ಸುನಿತಾಗೆ ಸನ್ಮಾನ
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆಯಾದ ಕೆಪಿಸಿಸಿ ಸಂಯೋಜಕಿ, ಮಾದಿಗ ಸಮುದಾಯದ ನಾಯಕಿ ಸುನಿತಾ ಸೋಮಲಿಂಗ ಐಹೊಳಿ ಅವರನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಚಿವ ಆರ್.ಬಿ.ತಿಮ್ಮಾಪೂರ ಹಾಗೂ ಶಾಸಕ ಲಕ್ಷ್ಮಣ ಸವದಿಯವರು ಸನ್ಮಾನಿಸಿ, ಅಭಿನಂದಿಸಿದರು.ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಸಾಧಕಿ-2025 ಪ್ರಶಸ್ತಿ ಲಭಿಸಿರುವುದು ನನ್ನ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟೂ ಹೆಚ್ಚಿಸಿದೆ. ಇಲ್ಲಿಯವರೆಗೆ ನನ್ನ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಮಾತ್ರ ಕೆಲಸ ಮಾಡಿದ್ದೇನೆ. ಇದರಲ್ಲಿ ನಾನು ಮಾಡಿದೆ ಎನ್ನುವುದು ಏನೂ ಇಲ್ಲ. ನನಗೆ ಸಂದ ಗೌರವ ನನ್ನ ಪಕ್ಷಕ್ಕೆ, ಕಾರ್ಯಕರ್ತರಿಗೆ ಹಾಗೂ ನನ್ನ ಮನೆಯವರಿಗೆ ಅರ್ಪಿಸುತ್ತೇನೆ.-ಸುನಿತಾ ಸೋಮಲಿಂಗ ಐಹೊಳೆ,
- ಲಕ್ಷ್ಮಣ ಸವದಿ,
ಅಥಣಿ ಶಾಸಕ.