ಹುಬ್ಬಳ್ಳಿ:

ನಗರದಾದ್ಯಂತ ಬುಧವಾರ ಗುರುಪೂರ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆಯಿಂದ ಸಂಜೆ ವರೆಗೆ ಮಠ, ದೇವಾಲಯ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಶ್ರೀಸಿದ್ಧಾರೂಢರ ಮಠ, ಮೂರುಸಾವಿರ ಮಠ, ಕೋರ್ಟ್ ವೃತ್ತದ ಶ್ರೀ ಸಾಯಿಬಾಬಾ ಮಂದಿರ, ದೇಶಪಾಂಡೆ ನಗರದ ಶ್ರೀಕೃಷ್ಣ ಮಂದಿರ, ಉಣಕಲ್ಲಿನ ಚಂದ್ರಮೌಳೀಶ್ವರ ದೇವಸ್ಥಾನ, ಸ್ವಾಮಿ ವಿವೇಕಾನಂದ ಆಶ್ರಮ, ದಾಜಿಬಾನ್ ಪೇಟೆಯ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ಸಾಯಿ ಮಂದಿರಗಳಲ್ಲಿ ದಿನವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬಂದರು. ಹಲವೆಡೆ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಗುರುಪೂರ್ಣಿಮೆಯ ಅಂಗವಾಗಿ ಕೋರ್ಟ್ ವೃತ್ತದ ಶ್ರೀಸಾಯಿಬಾಬಾ ಮಂದಿರದಲ್ಲಿ ಬೆಳಗ್ಗೆಯಿಂದಲೇ ಕಾಕಡಾರತಿ, ಮಹಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಸ್ವರ್ಣಪಾದ ದರ್ಶನ, ಬೆಳ್ಳಿ ಪಾದಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ಬಳಿಕ ಮಹಾಪ್ರಸಾದ ವಿತರಿಸಲಾಯಿತು. ಕಳೆದ 2-3 ದಿನಗಳಿಂದ ಆಧ್ಯಾತ್ಮಿಕ ಪ್ರವಚನ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದರೆ, ಬುಧವಾರ ಶ್ರೀಸಾಯಿ ಸಚ್ಚರಿತ್ರೆ ಪಾರಾಯಣವೂ ಜರುಗಿತು. ರಾತ್ರಿ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮೂರುಸಾವಿರ ಮಠಕ್ಕೂ ಸಾವಿರಾರು ಭಕ್ತರು ಭೇಟಿ ನೀಡಿ ಗದ್ದುಗೆಯ ದರ್ಶನ ಪಡೆದರು. ಗುರುಪೂರ್ಣಿಮೆಯ ಅಂಗವಾಗಿ ಮೂರ್ತಿಗಳಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಗದ್ದುಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು.


ನಗರದ ಶ್ರೀಸಿದ್ಧಾರೂಢರ ಮಠದಲ್ಲಿಯೂ ಬೆಳಗ್ಗೆಯಿಂದಲೇ ಭಕ್ತರ ಪ್ರವಾಹ ಕಂಡುಬಂತು. ಭಕ್ತರು ಶ್ರೀ ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಗದ್ದುಗೆಯ ದರ್ಶನ ಪಡೆದರು. ವಿಶೇಷ ಅಲಂಕಾರ, ಕಾಕಡಾರತಿ, ಅಭಿಷೇಕ, ಅನ್ನಸಂತರ್ಪಣೆ, ಸಂಜೆ ಪ್ರವಚನ ಹಾಗೂ ಭಜನಾ ಕಾರ್ಯಕ್ರಮ ಜರುಗಿದವು. ಸಂಜೆ ಮಠದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ಇದೇ ವೇಳೆ ಅನೇಕ ಮನೆಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿ ಹಾಗೂ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಇದಲ್ಲದೇ ಹಲವು ಶಾಲಾ-ಕಾಲೇಜುಗಳಲ್ಲೂ ಗುರುಪೂರ್ಣಿಮೆ ಆಚರಿಸಿರುವುದು ಕಂಡುಬಂದಿತು.