ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಗಳಿಗೆ ಪ್ರಾಧಿಕಾರದ ಬಿಸಿ

KannadaprabhaNewsNetwork |  
Published : Mar 21, 2025, 12:38 AM IST
ಹೆದ್ದಾರಿ ಬದಿಯ ಅಂಗಡಿಗಳಿಗೆ ಹೆದ್ದಾರಿ ಪ್ರಾಧಿಕಾರ ಬಿಸಿ  | Kannada Prabha

ಸಾರಾಂಶ

ಕುಶಾಲನಗರ - ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ಬದಿಯಲ್ಲಿ ತಲೆ ಎತ್ತಿದ್ದ ಅಂಗಡಿ ಮಳಿಗೆಗಳಿಗೆ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಕನ್ನಡ ಪ್ರಭ ವಾರ್ತೆ ಮಡಿಕೇರಿ

ಕುಶಾಲನಗರ- ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ಬದಿಯಲ್ಲಿ ತಲೆ ಎತ್ತಿದ್ದ ಅಂಗಡಿ ಮಳಿಗೆಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಿಸಿ ಮುಟ್ಟಿಸಿದರು.

ಸುಂಟಿಕೊಪ್ಪದಿಂದ ಸಂಪಾಜೆವರೆಗೆ ತೆರಳುವ ಹೆದ್ದಾರಿಯ ತಿರುವು ರಸ್ತೆ ಬದಿಯಲ್ಲೇ ಹಣ್ಣಿನ ಮಳಿಗೆಗಳು, ಕ್ಯಾಂಟೀನ್, ಕಬ್ಬು ಜ್ಯೂಸ್ ಅಂಗಡಿಗಳನ್ನು ಇಡಲಾಗಿದ್ದು, ರಸ್ತೆ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಈಗಾಗಲೇ ಇಂತಹ ಕಡೆಗಳಲ್ಲಿ ಅಳವಡಿಸಲಾಗಿದ್ದ ಬೃಹತ್ ಜಾಹೀರಾತು ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆರವು ಮಾಡಿದ್ದು, ಇದೀಗ ರಸ್ತೆ ಬದಿಯ ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭಿಸಿದೆ. ತಿರುವು ರಸ್ತೆಗಳ ಬದಿಯಲ್ಲಿ ಅಂಗಡಿಗಳನ್ನು ಹಾಕಿರುವ ವ್ಯಕ್ತಿಗಳಿಗೆ ನೋಟೀಸ್ ಕೂಡ ನೀಡಲಾಗಿದ್ದು, ಬೇರೆಡೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ.

ಅಧಿಕಾರಿಗಳಿಂದ ಪರಿಶೀಲನೆ:

ಸಾರ್ವಜನಿಕರ ದೂರುಗಳನ್ನು ಆಧರಿಸಿ ಮಂಗಳವಾರ ಹೆದ್ದಾರಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಕೆಲವು ಅಂಗಡಿ ಮಳಿಗೆಗಳನ್ನು ಬಂದ್ ಮಾಡಿಸಿದರು. ಹೈವೇ ಪ್ರಾಧಿಕಾರ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವುದನ್ನು ಅರಿತ ಕೆಲವು ವರ್ತಕರು ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿದ್ದರೆ, ಮತ್ತೆ ಕೆಲವರು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿ ಸ್ಥಳದಿಂದ ಪಲಾಯನ ಮಾಡಿರುವುದು ಕಂಡು ಬಂತು. ಇನ್ನು ಕೆಲವು ವರ್ತಕರು ಹೈವೇ ಅಧಿಕಾರಗಳ ಜೊತೆಯಲ್ಲಿ ನಾವು ಯಾವುದೇ ತಪ್ಪು ಮಾಡುತ್ತಿಲ್ಲ. ರಸ್ತೆ ಬದಿಯಲ್ಲಿ ತೊಂದರೆ ಆಗದಂತೆ ವ್ಯಾಪಾರ ನಡೆಸುತ್ತಿದ್ದೇವೆ. ಕೇವಲ ನಮ್ಮ ಅಂಗಡಿಯನ್ನು ಮಾತ್ರವೇ ಟಾರ್ಗೆಟ್ ಮಾಡಲಾಗುತ್ತಿದೆ. ಸಾಧ್ಯವಾದರೆ ಹೆದ್ದಾರಿ ಬದಿಯಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವು ಗೊಳಿಸಬೇಕು ಎಂದು ಉಚಿತ ಸಲಹೆ ನೀಡುತ್ತಿದ್ದುದು ಕಂಡು ಬಂತು.

ಅಪಘಾತ ನಿರಂತರ:

ಮಡಿಕೇರಿ ಮಾರ್ಗವಾಗಿ ಸಂಪಾಜೆ ಕಡೆಗೆ ತೆರಳುವ ಹೆದ್ದಾರಿ ಬದಿಯಲ್ಲಿ ಇಂತಹ 25ಕ್ಕೂ ಹೆಚ್ಚು ಮಳಿಗೆಗಳಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ. ಈ ಹೆದ್ದಾರಿಯ ತಿರುವು ರಸ್ತೆಗಳಲ್ಲಿ ಹಣ್ಣು ಮತ್ತಿತರ ವಸ್ತುಗಳನ್ನು ಖರೀದಿಸುವ ಸಲುವಾಗಿ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸಿ ತೆರಳುತ್ತಿರುವುದು ವಾಹನ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹೆದ್ದಾರಿಯಲ್ಲಿ ಹಲವಾರು ಅಪಘಾತ ಆಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಕೆಲವು ಅಪಘಾತ ಸ್ಥಳದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಮತ್ತು ಆಕ್ಷೇಪಗಳಿಗೆ ವೇದಿಕೆ ಒದಗಿಸಿದೆ. ಸ್ಥಳೀಯಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಿರಂತರ ಕಾರ್ಯಾಚರಣೆ:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಸುಂಟಿಕೊಪ್ಪದಿಂದ ಸಂಪಾಜೆವರೆಗಿನ ಹೆದ್ದಾರಿ ತೀರಾ ಕಡಿದಾದ ತಿರುವುಗಳಿಂದ ಕೂಡಿದೆ. ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿ ಕಡೆಗೆ ಆಗಮಿಸುತ್ತಾರೆ. ಇಂತಹ ತಿರುವು ರಸ್ತೆ ಬದಿಯಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸಲಾಗುತ್ತಿದ್ದು, ಹಲವು ಅಪಘಾತಗಳು ಕೂಡ ನಡೆದಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಹೈವೇ ಪ್ರಾಧಿಕಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ಕೆಆರ್‌ಡಿಸಿಎಲ್ ನಿಯಮದಂತೆ ರಸ್ತೆ ಮಧ್ಯದಿಂದ 12 ಮೀಟರ್ ಒಳಗೆ ಯಾವುದೇ ಶೆಡ್ ಹಾಕುವಂತಿಲ್ಲ ಎಂಬ ನಿಯಮವಿದೆ. ಈ ನಿಯಮ ಪಾಲಿಸದಿರುವುದು ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಹನುಮಂತು, ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿ ಮಹೇಶ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!