ಹಾವೇರಿ: ಬೆಳೆಯುತ್ತಿರುವ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹತ್ತಾರು ಮಹತ್ವದ ಯೋಜನೆಗಳನ್ನು ತಯಾರಿಸಲಾಗಿದೆ. ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲಾಗಿದೆ. ಮಹಾಯೋಜನೆಯ ವಿಸ್ತರಣೆ ಮತ್ತು ಉದ್ಯಾನವನಗಳ ಅಭಿವೃದ್ಧಿ, ರಿಂಗ್ ರೋಡ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ಎಫ್. ಎನ್. ಗಾಜಿಗೌಡ್ರ ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಣೆ ನೀಡಿದ ಅವರು, ನಗರದಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ಬಡಾವಣೆಗಳ ಮೇಲೆ ಪ್ರಾಧಿಕಾರ ಕಣ್ಣಿಟ್ಟಿದೆ. ಈಗಾಗಲೇ 22 ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಈ ಪೈಕಿ 8 ಮಂದಿ ಪ್ರಾಧಿಕಾರದ ನಿಯಮದಂತೆ ವಿನ್ಯಾಸ ಅನುಮೋದನೆ ಪಡೆದಿದ್ದಾರೆ. ನಿಯಮ ಮೀರುವ ಮಾಲೀಕರ ವಿರುದ್ಧ ಭೂದಾಖಲೆಗಳಲ್ಲಿ ''''''''ಸರ್ಕಾರ'''''''' ಎಂದು ನಮೂದಿಸಲು ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಕಠಿಣ ಕ್ರಮ ಜರುಗಿಸಲಾಗಿದೆ ಎಂದರು. 14 ಹಳ್ಳಿಗಳ ಸೇರ್ಪಡೆ: ನಗರ ಯೋಜನಾ ಪ್ರದೇಶವನ್ನು ಗಣನೀಯವಾಗಿ ವಿಸ್ತರಿಸಲಾಗಿದೆ. ಈ ಮೊದಲು 16 ಹಳ್ಳಿಗಳನ್ನು ಒಳಗೊಂಡಿತ್ತು. ಈಗ ಹೆಚ್ಚುವರಿಯಾಗಿ ಹದಿನಾಲ್ಕು ಹಳ್ಳಿಗಳನ್ನು ಸೇರಿಸಿ ಒಟ್ಟು 24261.35 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ. ಭವಿಷ್ಯದ ಹಿತದೃಷ್ಟಿಯಿಂದ ನಗರಕ್ಕೆ 11.5 ಕಿ.ಮೀ ಉದ್ದದ ವರ್ತುಲ ರಸ್ತೆ ನಿರ್ಮಾಣಕ್ಕೆ ಡಿ.ಪಿ.ಆರ್ ಸಿದ್ಧಪಡಿಸಲು ಟೆಂಡರ್ ನೀಡಲಾಗಿದೆ. ಡಿ.ಪಿ.ಆರ್ ತಯಾರಿಸಿ ವರ್ತುಲ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ನಗರದ ವಿವಿಧ ಭಾಗಗಳಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ: ಸಂತ ಶಿಶುನಾಳ ಶರೀಫ ಉದ್ಯಾನವನ ರು.31.65 ಲಕ್ಷ, ಕೆ.ಎಫ್. ಪಾಟೀಲ ಉದ್ಯಾನವನ ರು. 27.61 ಲಕ್ಷ ಹಾಗೂ ವೀರವನಿತೆ ಒನಕೆ ಓಬವ್ವ ಉದ್ಯಾನವನ ರು.40.53 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಹಾಗೆಯೆ ಅಕ್ಕಮಹಾದೇವಿ ಹೊಂಡದ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗೆ ರು. 1.50 ಕೋಟಿ ವೆಚ್ಚದಲ್ಲಿ ಫುಡ್ ಕೋರ್ಟ್ ಕಾಮಗಾರಿ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಲಾಗುವುದು ಎಂದರು. ವಸತಿ ಯೋಜನೆಗೆ ಪ್ರಯತ್ನ: ಪ್ರಾಧಿಕಾರವು ರೈತರೊಂದಿಗೆ 50:50ರ ಅನುಪಾತದಲ್ಲಿ ಜಂಟಿಯಾಗಿ ವಸತಿ ಯೋಜನೆಗಳನ್ನು ರೂಪಿಸುತ್ತಿದೆ. ತೋಟದ ಯಲ್ಲಾಪುರ 8 ಎಕರೆ, ಕನಕಾಪುರ 12 ಎಕರೆ ಮತ್ತು ದೇವಗಿರಿ ಯಲ್ಲಾಪುರ 17 ಎಕರೆ. ಗ್ರಾಮಗಳಲ್ಲಿ ವಸತಿ ಲೇಔಟ್ ನಿರ್ಮಿಸಲು ಮಾತುಕತೆ ನಡೆಸಲಾಗುತ್ತಿದೆ. ಅಲ್ಲದೆ ಲಭ್ಯವಿರುವ 40 ಸಿ.ಎ. ನಿವೇಶನಗಳ ಪೈಕಿ ಈಗಾಗಲೇ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳಲ್ಲಿ 10 ವಿವಿಧ ಸಂಘ-ಸಂಸ್ಥೆಗಳಿಗೆ ಹಾಗೂ 01 ಸಮಾಜ ಕಲ್ಯಾಣ ಇಲಾಖೆಗೆ ಮತ್ತು 03 ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.ಡಿಜಿಟಲ್ ಆಡಳಿತಕ್ಕೆ ಮುನ್ನುಡಿ: ಪ್ರಾಧಿಕಾರದ ಕಚೇರಿ ಕೆಲಸಗಳನ್ನು ಪಾರದರ್ಶಕಗೊಳಿಸಲು ''''''''ಇ-ಆಫೀಸ್'''''''' ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಚೇರಿಯನ್ನು ಪೇಪರ್ ರಹಿತ ಕಚೇರಿಯನ್ನಾಗಿ ಮಾಡಲಾಗುವುದು. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತದ ಸಹಕಾರವಿದ್ದು, ಬರುವ ದಿನಗಳಲ್ಲಿ ಹಾವೇರಿ ಜಿಲ್ಲೆಯನ್ನು ಮಾದರಿ ನಗರವನ್ನಾಗಿ ರೂಪಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ವೀರಮಲ್ಲಪ್ಪ ಪೂಜಾರ, ಪ್ರಾಧಿಕಾರದ ಸದಸ್ಯರಾದ ಬಸವರಾಜ ಮಾಳಗಿ, ಜಮೀರ್ ಜಿಗರಿ, ಮಹಾಲಿಂಗಯ್ಯ ಪಾಟೀಲ್, ವೀಣಾ ಹಲಗಣ್ಣನವರ, ಶೈಲಜಾ ಕೆರೆಮನೆ ಇದ್ದರು.