ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರ ಸಹಜ ಸಾವಿನ ಸಾಂತ್ವನ ನಿಧಿ ₹1 ಲಕ್ಷ ಘೋಷಿಸಲು ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಬರುವ ಅಸಂಘಟಿತ ಕಾರ್ಮಿಕ ವಿಭಾಗಗಳಲ್ಲಿ ಬರುವಂತಹ ಹಮಾಲಿಗಳನ್ನು ಮೋಟಾರ್ ಸಾರಿಗೆಗೆ ಸಂಬಂಧಿಸಿದ ಸಾಮಾಜಿಕ ಭದ್ರತಾ ಮಂಡಳಿಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಒತ್ತಾಯಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ ಮಾತನಾಡಿ, ರಾಜ್ಯದಲ್ಲಿ ವಿವಿಧ ಸಮಸ್ಯೆಗಳೊಂದಿಗೆ ಬದುಕು ಕಟ್ಟಿಕೊಂಡಿರುವ ಅಸಂಘಟಿತ ಕಾರ್ಮಿಕ ಸಮೂಹ ತನ್ನ ಕಾಯಕವನ್ನು ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನಾಗಿ ಅಪಘಾತ ವಿಮೆ ಆಸ್ಪತ್ರೆ ವೆಚ್ಚಗಳನ್ನು ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ನೀಡುತ್ತಿದ್ದು, ಇದು ಕುಟುಂಬದ ಫಲಾನುಭವಿಗಳಿಗೆ ಪೂರಕವಾಗಿಲ್ಲ. ಇದು ಅಪಘಾತಗೊಂಡ ಅಸಂಘಟಿತ ಕಾರ್ಮಿಕನ ಆಸ್ಪತ್ರೆ ವೆಚ್ಚಗಳು, ಜಾಸ್ತಿ ಇರುವ ಆಸ್ಪತ್ರೆ ವೆಚ್ಚದಲ್ಲಿ ಶೇ. ೭೫ ಸರ್ಕಾರ ಪಾವತಿ ಮಾಡಲು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘವು ಆಗ್ರಹಿಸುತ್ತದೆ. ಇದರ ವ್ಯಾಪ್ತಿಗೆ ಬರುವಂತಹ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಬರುವ ಎಲ್ಲಾ ಕಾರ್ಮಿಕರಿಗೂ ಇದು ಅನ್ವಯವಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.ನಂತರ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು, ರಾಜ್ಯದಲ್ಲಿ ಮೋಟಾರ್ ಸಾರಿಗೆ ಸಂಬಂಧಿಸಿದ ಕಾರ್ಮಿಕರಿಗೆ ರಾಜ್ಯ ಸರ್ಕಾರವು ಘೋಷಿಸಿರುವ ಮೋಟಾರ್ ಸಾರಿಗೆಗೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ಈಗ ನೀಡುತ್ತಿರುವ ೫ ಲಕ್ಷ ರು.ಅಪಘಾತ ವಿಮೆ ಮತ್ತು ಆಸ್ಪತ್ರೆಯ ವೆಚ್ಚದಲ್ಲಿ ಬದಲಾವಣೆ ಮಾಡಬೇಕಾಗಿದೆ. ಆಸ್ಪತ್ರೆಯ ವೆಚ್ಚಗಳು ಗಣನೀಯ ಪ್ರಮಾಣದಲ್ಲಿರುವುದರಿಂದ ಅಪಘಾತಗೊಂಡ ಮೋಟಾರ್ ಕಾರ್ಮಿಕನ ಆಸ್ಪತ್ರೆ ವೆಚ್ಚದಲ್ಲಿ ಶೇಕಡ ೭೫ರಷ್ಟು ಕಾರ್ಮಿಕ ಮಂಡಳಿಯು ವಿತರಿಸುವಂತೆ ಸಂಘವು ಒತ್ತಾಯಿಸುತ್ತದೆ ಹಾಗೂ ಮೋಟಾರ್ ಕಾರ್ಮಿಕನ ಸಹಜ ಸಾವಿಗೆ ಈಗ ನೀಡುತ್ತಿರುವ ಸಾಂತ್ವನ ಪರಿಹಾರ ಧನವು ಅತ್ಯಂತ ಕಡಿಮೆ ಮಟ್ಟದಲ್ಲಿದ್ದು ಅದನ್ನು ಒಂದು ಲಕ್ಷ ರು. ಹೆಚ್ಚಿಸುವಂತೆ ಸಂಘವು ಆಗ್ರಹಿಸುತ್ತದೆ ಎಂದರು.ರಾಜ್ಯ ಉಪಾಧ್ಯಕ್ಷ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಮಹೇಶ್ ಪೇಟ್ಕರ್, ಜಿಲ್ಲಾಧ್ಯಕ್ಷ ಎಸ್.ಎಸ್.ರಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಸಗೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನಗರಾಧ್ಯಕ್ಷ ಮಹೇಶ್ ಭಾಗವಹಿಸಿದ್ದರು.