ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ನಿರ್ಮಾಣವಾದ ಗುಂಡಿಗಳು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ದಿನದಿಂದ ದಿನಕ್ಕೆ ರಸ್ತೆಗಳ ಸ್ಥಿತಿ ಹದಗೆಡುತ್ತಿದ್ದು, ಸಾರ್ವಜನಿಕರು ಹಾಗೂ ಆಟೋ ರಿಕ್ಷಾ ಚಾಲಕರು ಅಪಾರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸುವಂತೆ ಕಾರ್ಕಳ ತಾಲೂಕು ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 850 ಆಟೋ ರಿಕ್ಷಾಗಳು ಸಂಚರಿಸುತ್ತಿದ್ದರೂ, ಹದಗೆಟ್ಟ ರಸ್ತೆಗಳ ಕಾರಣದಿಂದ ವಾಹನ ಓಡಿಸುವುದು ಮತ್ತಷ್ಟು ಕಷ್ಟವಾಗಿದೆ. ಕೆಲ ಸಂದರ್ಭಗಳಲ್ಲಿ ಅವಘಡದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಗುಂಡಿಗಳಿಂದ ತುಂಬಿರುವ ರಸ್ತೆಗಳಿಂದಾಗಿ ರಿಕ್ಷಾಗಳಿಗೆ ದುರಸ್ತಿ ವೆಚ್ಚ ಹೆಚ್ಚಾಗಿದ್ದು, ಬಂದ ಬಾಡಿಗೆ ಹಣದಿಂದ ವಾಹನದ ದುರಸ್ತಿ ಹಾಗೂ ಕುಟುಂಬದ ಜೀವನೋಪಾಯ ನಿರ್ವಹಿಸುವುದು ಚಾಲಕರಿಗೆ ದೊಡ್ಡ ಸವಾಲಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ವಿವರಿಸಿದರು. ಕಾರ್ಕಳ ಪುರಸಭೆ ವ್ಯಾಪ್ತಿಯ ಕೆಲವು ರಸ್ತೆಗಳು ಇಕ್ಕಟ್ಟಾಗಿದ್ದು, ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ. ಅದರ ಹೊರತಾಗಿ ಕೆಲವು ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ವಾಹನಗಳಿಂದಲೇ ವ್ಯಾಪಾರ ನಡೆಸುತ್ತಿರುವುದರಿಂದ ಸಂಚಾರ ಇನ್ನಷ್ಟು ಅಸ್ತವ್ಯಸ್ತಗೊಂಡಿದ್ದು, ಪುರಸಭೆ ಇದಕ್ಕೆ ತಕ್ಷಣ ಬ್ರೇಕ್ ಹಾಕಬೇಕೆಂದು ಅವರು ಒತ್ತಾಯಿಸಿದರು. ರಸ್ತೆಗಳ ದುರಸ್ತಿ ಹಾಗೂ ಸಂಚಾರ ಸುಧಾರಣೆಗೆ ಪುರಸಭೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಸಂಘ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಪ್ರತಿಭಟಿಸಲು ಸಿದ್ಧವಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಎಚ್ಚರಿಕೆ ನೀಡಿದರು. ಸಂಘದ ಉಪಾಧ್ಯಕ್ಷ ವಿಶ್ವನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಣ್ಣಿ ಮಡಿವಾಳ, ಕಾರ್ಯದರ್ಶಿ ಹರೀಶ್ ದೇವಾಡಿಗ, ಕೋಶಾಧಿಕಾರಿ ಅರುಣ್ ಕಿಣಿ ಹಾಗೂ ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್ ಇದ್ದರು.