ಗ್ಯಾಸ್‌ ಬೆಲೆ ಏರಿಕೆಗೆ ಅಟೋ ಚಾಲಕರ ಪರದಾಟ

KannadaprabhaNewsNetwork |  
Published : Apr 11, 2026, 02:15 AM IST
10ಕೆಪಿಎಲ್25 ಕೊಪ್ಪಳ ನಗರದಲ್ಲಿ  ಗ್ಯಾಸ್ ತುಂಬಿಸಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಪೆಟ್ರೋಲ್ ಬಳಕೆ ಮಾಡಿಕೊಂಡು ಓಡಾಡುವವರು ಅದೇ ದರದಲ್ಲಿಯೇ ಓಡಿಸುತ್ತಾರೆ. ನಾವು ಗ್ಯಾಸ್ ಬಳಕೆ ಮಾಡುತ್ತೇವೆ ಎಂದು ದರ ಏರಿಕೆ ಮಾಡಿದರೆ ಪ್ರಯಾಣಿಕರು ಯಾರೂ ಬರುವುದಿಲ್ಲ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಇಷ್ಟು ದಿನ ಗ್ಯಾಸ್ ಇರಲಿಲ್ಲ. ಈಗ ಆಟೋ ಗ್ಯಾಸ್ ಬಂದಿದೆ. ಆದರೆ, ದರ ಮಿತಿಮೀರಿ ದುಬಾರಿಯಾಗಿದೆ.

ಇದು, ಆಟೋ ಚಾಲಕ ಅಕ್ಬರ್ ಮಾತು. ಹೌದು, ಇಷ್ಟು ದಿನಗಳ ಕಾಲ ಕೊಪ್ಪಳದಲ್ಲಿ ಎಲ್‌ಪಿಜಿ ಗ್ಯಾಸ್ ಇರಲೇ ಇಲ್ಲ. ಇದರಿಂದ ಆಟೋದವರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಕಳೆದರೆಡು ದಿನಗಳ ಹಿಂದೆ ಗ್ಯಾಸ್ ಬಂದಿದ್ದರೂ ಬಂಕ್ ರಿಪೇರಿ ಇದ್ದ ಕಾರಣ ಶುಕ್ರವಾರದಿಂದ ಗ್ಯಾಸ್ ಸಿಗುತ್ತದೆ ಎನ್ನಲಾಗಿದೆ. ಆದರೆ, ಲೀಟರ್ ಗೆ ₹90 ಇದ್ದ ಗ್ಯಾಸ್ ಏಕಾಏಕಿ ₹120 ಆಗಿದೆ. ಇದರಿಂದ ಆಟೋದವರು ಇದು ನಮಗೆ ವರ್ಕೌಟ್ ಆಗಲ್ಲ. ಈಗಿರುವ ದರದಲ್ಲಿ ಆಟೋ ಓಡಿಸಿದರೆ ಹೊರೆಯಾಗುತ್ತದೆ ಎನ್ನುತ್ತಾರೆ.

ಪೆಟ್ರೋಲ್ ಬಳಕೆ ಮಾಡಿಕೊಂಡು ಓಡಾಡುವವರು ಅದೇ ದರದಲ್ಲಿಯೇ ಓಡಿಸುತ್ತಾರೆ. ನಾವು ಗ್ಯಾಸ್ ಬಳಕೆ ಮಾಡುತ್ತೇವೆ ಎಂದು ದರ ಏರಿಕೆ ಮಾಡಿದರೆ ಪ್ರಯಾಣಿಕರು ಯಾರೂ ಬರುವುದಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಗ್ಯಾಸ್ ಆಟೋದವರು.

ನಾವು ಇಷ್ಟು ದಿನ ಗ್ಯಾಸ್‌ ಇಲ್ಲ ಎಂದು ಆಟೋ ಓಡಿಸಿಯೇ ಇಲ್ಲ. ಈಗ ಗ್ಯಾಸ್ ಬಂದರೂ ಆಟೋ ಓಡಿಸುವುದು ಸಮಸ್ಯೆಯಾಗುತ್ತದೆ. ಸರ್ಕಾರ ದರ ನಿಯಂತ್ರಣ ಮಾಡಬೇಕು ಎನ್ನುತ್ತಾರೆ.

ಈ ಕುರಿತು ಎಲ್ ಪಿ ಜಿ ಬಂಕ್ ನವರು ಹೇಳುವುದೇ ಬೇರೆ, ಇದು ನಾವು ಏರಿಕೆ ಮಾಡಿಲ್ಲ, ರಾಜ್ಯ ಸೇರಿದಂತೆ ದೇಶಾದ್ಯಂತ ಏರಿಕೆಯಾಗಿದೆ. ಹೀಗಾಗಿ ನಾವೇನೂ ಮಾಡಲು ಬರುವುದಿಲ್ಲ ಎನ್ನುತ್ತಾರೆ.

ದುಬಾರಿಯಾದ ದರ: ಈಗ ಆಟೋ ದರ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಗ್ಯಾಸ್ ಸಿಗುತ್ತಿಲ್ಲ ಎಂದು ಏರಿಕೆ ಮಾಡಿದ್ದನ್ನು ಇಳಿಕೆ ಮಾಡುವ ಮುನ್ನವೇ ಗ್ಯಾಸ್ ದರ ಏರಿಕೆಯಾಗಿರುವುದರಿಂದ ಹತ್ತು ಇದ್ದ ಶೇರಿಂಗ್‌ ಆಟೋ ದರ ₹20 ಆಗಿದೆ. ಗ್ಯಾಸ್ ಏರಿಕೆಯಾಗಿದ್ದರಿಂದ ಆಟೋ ದರ ಹೆಚ್ಚಳ ಮಾಡಿದ್ದು ಮತ್ತೆ ಟಾಂಗಾ ಸುತ್ತಾಡುವಂತಾಗಿದೆ. ಆಟೋದ ಅಬ್ಬರದಲ್ಲಿ ಕಣ್ಮರೆಯಾಗಿದ್ದ ಟಾಂಗಾ ಈಗ ಅಲ್ಲೊಂದು, ಇಲ್ಲೊಂದು ಕಾಣಿಸಲಾರಂಭಿಸಿವೆ. ಆದರೂ ಟಾಂಗಾದಲ್ಲಿ ಓಡಾಡಲು ಪ್ರಯಾಣಿಕರು ಮುಂದೆ ಬರುತ್ತಿಲ್ಲ. ಎಲ್ಲರೂ ಆಟೋದಲ್ಲಿಯೇ ಹೋಗಬೇಕು ಎನ್ನುತ್ತಾರೆ. ಆಟೋ ದರ ದುಬಾರಿಯಾದರೂ ಟಾಂಗಾದಲ್ಲಿ ಸುತ್ತಾಡುವುದಕ್ಕೆ ಯಾರೂ ಸಿದ್ಧರಿಲ್ಲ ಎನ್ನುವುದು ಟಾಂಗಾದವರು ಮಾತು.

ಕಾಳಸಂತೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್: ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗಬೇಕಾದಲ್ಲಿ ಸಿಗುತ್ತಿಲ್ಲ. ಆದರೆ, ಕಾಳಸಂತೆಯಲ್ಲಿ ಅವ್ಯಾಹತವಾಗಿ ಮಾರಾಟ ಮಾಡಲಾಗುತ್ತಿದೆ. ಇದರ ದೊಡ್ಡ ಜಾಲವೇ ಹುಟ್ಟಿಕೊಂಡಿದ್ದು, ಹೀಗಾಗಿ, ಕೃತಕ ಅಭಾವ ಸೃಷ್ಟಿ ಮಾಡಿ ಮಾರುಕಟ್ಟೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಅಕ್ರಮ ಮಾರಾಟ: ಸಿಲಿಂಡರ್ ಬೇಡಿಕೆ ಬಂದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಡುಗೆ ಅನಿಲ ಸಿಲಿಂಡರ್ ಅಕ್ರಮವಾಗಿ ಹೋಟೆಲ್ ಸೇರಿದಂತೆ ವಾಣಿಜ್ಯ ಬಳಕೆಗೆ ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿ ಬಳಕೆಯಾಗದೆ ಇರುವ ಸಿಲಿಂಡರ್ 1500ರು.ಗೆ ಖರೀದಿ ಮಾಡಿ ಅದನ್ನೇ 2 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಇಂಥದ್ದೊಂದು ಜಾಲ ಈಗ ಜೋರಾಗಿ ನಡೆಯುತ್ತಿದೆ.

ನಮ್ಮದೇನು ಇಲ್ಲ ಸರ್, ಎಲ್ಲ ಕಡೆಯೂ ದುಬಾರಿಯಾಗಿದೆ. ಹೀಗಾಗಿ, ಏನೂ ಮಾಡಲು ಆಗುವುದಿಲ್ಲ. ₹ 90 ಇದ್ದದ್ದು ₹120 ಆಗಿದೆ ಎಂದು ಗ್ಯಾಸ್‌ ಬಂಕ್‌ ಪ್ರತಿನಿಧಿ ಆರ್‌.ಬಿ.ಉಪ್ಪಿನ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಹೇಳಿಕೆ ವಿರುದ್ಧ ಹಳಿಯಾಳ ಠಾಣೆಯಲ್ಲಿ ಬಿಜೆಪಿ ದೂರು
ನ್ಯಾಷನಲ್ ಪದವಿಪೂರ್ವ ಕಾಲೇಜಿಗೆ ಶೇ. 95 ಫಲಿತಾಂಶ