ಕನ್ನಡಪ್ರಭ ವಾರ್ತೆ ಬೆಂಗಳೂರು
ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಬೇಸರಿಸಿಕೊಂಡು ಮನೆ ಬಿಟ್ಟು ಹೋಗುತ್ತಿದ್ದ ಯುವಕನ ಬಳಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಎಂ.ಎಸ್.ಪಾಳ್ಯದ ಸಿಂಗಾಪುರ ಲೇಔಟ್ ನಿವಾಸಿ ಸಾದಿಲ್ ಅಲಿಯಾಸ್ ಅನಿ (32) ಬಂಧಿತ ಆಟೋ ಚಾಲಕ. ಈತನಿಂದ ₹6.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಯು ದೊಡ್ಡನಕ್ಕುಂದಿ ನಿವಾಸಿ ಕಿಶನ್ ರೆಡ್ಡಿ(20) ಎಂಬಾತನ ಬಳಿ ಏ.2ರಂದು ಚಿನ್ನಾಭರಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:ಕಿಶನ್ ರೆಡ್ಡಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದು, ಹೆಚ್ಚಿನ ಕಾಲ ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದ. ಹೀಗಾಗಿ ಸ್ನೇಹಿತರ ಜತೆಗೆ ಒಡನಾಟ ಕಡಿಮೆ ಮಾಡಿ ಓದಿನ ಕಡೆಗೆ ಗಮನ ಕೊಡುವಂತೆ ತಂದೆ ಬುದ್ಧಿ ಹೇಳಿದ್ದಾರೆ. ಇದರಿಂದ ಬೇಸರಿಸಿಕೊಂಡು ಕಿಶನ್ ರೆಡ್ಡಿ ಏ.2ರಂದು ಮುಂಜಾನೆ ಮನೆ ಬಿಟ್ಟು ತೆರಳಿದ್ದಾನೆ.
ಈ ಸಂಬಂಧ ನೀಡಲಾದ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಎಚ್‌ಎಎಲ್ ಠಾಣೆ ಪೊಲೀಸರು, ತನಿಖೆ ವೇಳೆ ಮೊಬೈಲ್ ಕರೆಗಳನ್ನು ಆಧರಿಸಿ ಕಿಶನ್ ರೆಡ್ಡಿ ಪುರಿ ಜಗನ್ನಾಥ ದೇವಸ್ಥಾನದ ಬಳಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೂಡಲೇ ಒಂದು ತಂಡ ಪುರಿಗೆ ತೆರಳಿ ಏ.6ರಂದು ಕಿಶನ್ ರೆಡ್ಡಿಯನ್ನು ಪತ್ತೆಹಚ್ಚಿ ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.ಚಿಕ್ಕಪ್ಪ ವಿಚಾರಿಸಿದಾಗ ದರೋಡೆ ಬೆಳಕಿಗೆ:
ಈ ನಡುವೆ ಕಿಶನ್ ರೆಡ್ಡಿ ಧರಿಸುತ್ತಿದ್ದ ಚಿನ್ನದ ಚೈನ್, ಉಂಗುರ ಕಾಣಿಸದಿರುವ ಬಗ್ಗೆ ಚಿಕ್ಕಪ್ಪ ಪ್ರಶ್ನಿಸಿದ್ದಾರೆ. ಆಗ ಆಟೋ ಚಾಲಕ ಬ್ಯಾಗ್ ದರೋಡೆ ಮಾಡಿದ ಬಗ್ಗೆ ಕಿಶನ್ ರೆಡ್ಡಿ ಹೇಳಿದ್ದಾನೆ. ಸಂಬಂಧ ಏ.13ರಂದು ಎಚ್‌ಎಎಲ್ ಠಾಣೆಗೆ ನೀಡಲಾದ ದೂರಿನ ಮೇರೆಗೆ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಏ.2ರಂದು ಮುಂಜಾನೆ ಆಟೋ ಸಂಚರಿಸಿದ ಸಮಯ, ಮಾರ್ಗದ ಆಧಾರದ ಮೇಲೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆಟೋದ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ ಬಳಿಕ ಆಟೋ ಚಾಲಕನನ್ನು ಬಂಧಿಸಿದ್ಧಾರೆ.ಮೂತ್ರ ವಿಸರ್ಜನೆ ವೇಳೆ ಬ್ಯಾಗ್ ಕಸಿದ!
ಕಿಶನ್ ರೆಡ್ಡಿ ಏ.2ರಂದು ಮುಂಜಾನೆ ಸುಮಾರು 4.30ಕ್ಕೆ ಮನೆ ಬಿಟ್ಟು ದೊಡ್ಡನಕ್ಕುಂದಿ ಬಳಿಯ ಬಸವನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ತೆರಳಲು ಆರೋಪಿ ಸಾದಿಲ್‌ನ ಆಟೋ ಹತ್ತಿದ್ದಾನೆ. ಬಳಿಕ ತಾನು ಧರಿಸಿದ್ದ 91 ಗ್ರಾಂ ತೂಕದ ಚಿನ್ನದ ಸರ ಮತ್ತು 9 ಗ್ರಾಂ ತೂಕದ ಉಂಗುರವನ್ನು ಬಿಚ್ಚಿ ಬ್ಯಾಗ್‌ಗೆ ಇರಿಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಆಟೋ ಚಾಲಕ ಸಾದಿಲ್, ಮಾರ್ಗ ಮಧ್ಯೆ ರಮೇಶ್‌ನಗರದ ಮುಖ್ಯರಸ್ತೆಯಲ್ಲಿ ಮೂತ್ರ ವಿಸರ್ಜನಗೆ ಆಟೋ ನಿಲ್ಲಿಸಿದ್ದಾನೆ. ಈ ವೇಳೆ ಬ್ಯಾಗ್ ಹಿಡಿದುಕೊಂಡೇ ಕಿಶನ್ ರೆಡ್ಡಿ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ. ಈ ವೇಳೆ ಸಾದಿಲ್ ಹಿಂದಿನಿಂದ ಆಟೋ ಚಲಾಯಿಸಿಕೊಂಡು ಬಂದು ಕಿಶನ್ ರೆಡ್ಡಿಯ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ. ನಂತರ ಕಿಶನ್ ರೆಡ್ಡಿ ಬೇರೆ ಆಟೋ ಹಿಡಿದು ಮೆಜೆಸ್ಟಿಕ್‌ಗೆ ತೆರಳಿ ಅಲ್ಲಿಂದ ರೈಲು ಹಿಡಿದು ಭುವನೇಶ್ವರದತ್ತ ಪ್ರಯಾಣ ಬೆಳೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪತ್ನಿ ಹೆಸರಿನಲ್ಲಿ ಅಡಮಾನ ಇರಿಸಿದ್ದ!ಆರೋಪಿ ಸಾದಿಲ್, ಕಿಶನ್ ರೆಡ್ಡಿ ಬಳಿ ಸುಲಿಗೆ ಮಾಡಿದ್ದ ಚಿನ್ನಾಭರಣಗಳನ್ನು ಪತ್ನಿಯ ಹೆಸರಿನಲ್ಲಿ ವಿದ್ಯಾರಣ್ಯಪುರದ ಮುತ್ತೂಟ್ ಫೈನಾನ್ಸ್‌ನಲ್ಲಿ ಗಿರಿವಿ ಇರಿಸಿದ್ದ. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.