ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವು ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡ ದೇವರಾಜೇಗೌಡ ನೇರ ಆರೋಪ ಮಾಡಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ವಾಗ್ದಾಳಿ ನಡೆಸಿದ್ದಾರೆ.‘ಅಶ್ಲೀಲ ವಿಡಿಯೋ ಬಹಿರಂಗ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ.
ಅಲ್ಲದೆ, ‘ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸಲಿದೆ ಎಂಬ ವಿಶ್ವಾಸ ಇಲ್ಲ. ಈ ಹಿನ್ನೆಲೆಯಲ್ಲಿ ಪೆನ್‌ಡ್ರೈವ್ ಮತ್ತು ಮಹಿಳೆಯರ ವಿಡಿಯೋ ಬಹಿರಂಗ ಮಾಡಿದ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಎರಡೂ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ಮಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಪಕ್ಷವು ರಾಜ್ಯಪಾಲರಿಗೆ ದೂರು ನೀಡಲಿದೆ. ಈ ವಿಷಯವನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿ ನಡೆದ ಈ ಘಟನೆ ಅತ್ಯಂತ ಕೆಟ್ಟದ್ದು. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲು ಎರಡು ದಿನ ಇರುವಾಗಲೇ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ. ಪೋಲಿಸರನ್ನು, ಅಧಿಕಾರಿಗಳನ್ನು ಬಳಸಿಕೊಂಡೇ ಪೆನ್‌ಡ್ರೈವ್ ಹಂಚಲಾಗಿದೆ ಎಂದು ಆಪಾದಿಸಿದರು.ರಾಜ್ಯ ಸರ್ಕಾರವು ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ತಂಡ ರಚಿಸಿದೆ. ಆದರೆ, ಎಸ್‌ಐಟಿ ಎಂದರೆ ವಿಶೇಷ ತನಿಖಾ ತಂಡವಲ್ಲ. ಬದಲಿಗೆ ‘ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್’ ಮತ್ತು ‘ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್’ ಆಗಿ ಕೆಲಸ ಮಾಡುತ್ತಿದೆ. ಇವರಿಬ್ಬರ ಪ್ರಭಾವಕ್ಕೊಳಗಾಗಿ ಎಸ್‌ಐಟಿ ಕೆಲಸ ಮಾಡುತ್ತಿದೆ ಎಂದರು.
ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಆದರೆ, ಆ ವಿಡಿಯೋಗಳಲ್ಲಿರುವ ಮಹಿಳೆಯರನ್ನು ಬೀದಿಗೆ ತಂದ ನೀಚರಿಗೆ ಶಿಕ್ಷೆಯಾಗಬೇಕು. ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ ನವೀನ್ ಗೌಡ ಎಂಬಾತನಿಗೆ ಏನು ಶಿಕ್ಷೆಯಾಗಿದೆ? ಯಾರು ಇವನನ್ನು ರಕ್ಷಣೆ ಮಾಡುತ್ತಿದ್ದಾರೆ? ಹಾಸನದ ಜೆಡಿಎಸ್ ಅಭ್ಯರ್ಥಿಯ ಏಜೆಂಟ್ ಪೂರ್ಣಚಂದ್ರ ಅವರು ನವೀನ್ ಗೌಡ ಸೇರಿ ನಾಲ್ವರ ವಿರುದ್ಧ ದೂರು ನೀಡಿ 15 ದಿನಗಳಾಗಿದೆ. ಇಲ್ಲಿಯವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೇವಣ್ಣ ವಿರುದ್ಧ ಯಾರೂ ದೂರು ನೀಡಿಲ್ಲ:
ಈ ಸಮಯದವರೆಗೂ ರೇವಣ್ಣ ವಿರುದ್ಧ ಯಾರೂ ದೂರು ನೀಡಿಲ್ಲ. ಆದರೂ ಕಿಡ್ನಾಪ್ ಪ್ರಕರಣ ಹಾಕಿದ್ದಾರೆ. ಆ ಹೆಣ್ಣುಮಗಳನ್ನು ಯಾರು ಕಂಡುಹಿಡಿದರು? ಯಾರು ಆ ಹೆಣ್ಣುಮಗಳನ್ನ ಕರೆದುಕೊಂಡು ಬಂದರು? 24 ಗಂಟೆಗಳ ಕಾಲ ನಿಮ್ಮ ಕಚೇರಿಯಲ್ಲಿ ಯಾಕೆ ಕೂರಿಸಿಕೊಂಡಿರಿ? ಇಲ್ಲಿಯವರೆಗೂ ಆ ಹೆಣ್ಣು ಮಗಳನ್ನು ನ್ಯಾಯಮೂರ್ತಿಗಳ ಮುಂದೆ ಯಾಕೆ ಕರೆದುಕೊಂಡು ಹೋಗಿಲ್ಲ ಎಂದು ಕುಮಾರಸ್ವಾಮಿ ಎಸ್‌ಐಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಂಸದರದು ಪೆನ್ ಡ್ರೈವ್ ಕುಟುಂಬ ಎಂದು ಸಂಸದ ಸುರೇಶ್ ಹೇಳುತ್ತಾರೆ. ನಿಮ್ಮದು ಏನೇನು ಓಡಾಡ್ತಿದೆ ಎನ್ನೋದು ಗೊತ್ತಿಲ್ಲವೇ ಸುರೇಶು? ಬೇಕಾದಷ್ಟು ಇವೆ. ಇನ್ನೂ ಬೇಕಾದಷ್ಟು ಬರುತ್ತವೆ. ನಿರೀಕ್ಷಿಸಿ ಎಂದು ತೀಕ್ಷ್ಣವಾಗಿ ಹೇಳಿದರು.
ಈ ತನಿಖೆಯಲ್ಲಿ ಎಸ್ಐಟಿಯವರಿಗೆ ದೂರು ನೀಡಲು ಸಂತ್ರಸ್ತೆಯರು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರಿಯಾಗಿ ಹುಡುಕಿದರೆ ಯಾರು ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ದೂರು ಕೊಡಿಸಿದ್ದಾರೆ ಎಂದು ಹೊರಗೆ ಬರಲಿದೆ ಎಂದು ಹೇಳಿದರು.25 ಸಾವಿರ ಪೆನ್ ಡ್ರೈವ್ ಹಂಚಿಕೆ: ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪೂರ್ಣಚಂದ್ರ ತೇಜಸ್ವಿ ಅವರು ನೀಡಿದ ದೂರಿಗೆ ಪ್ರತಿಯಾಗಿ ಅವರು ಹಿಂಬರಹ ನೀಡಿದ್ದಾರೆ. ಇದರರ್ಥ ಈ ವಿಷಯ ಸರ್ಕಾರದ ಗಮನಕ್ಕೆ ಹೋಗಿದೆ ಎಂದರ್ಥ. ಹಾಸನ ನಗರದಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದೂರು ದಾಖಲಿಸಿದ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದಾದರೂ ಅವಹೇಳನಕಾರಿ ಪೋಸ್ಟ್ ಹಾಕಿದರೆ ಪೊಲೀಸರು ತಕ್ಷಣ ಹುಡುಕಿಕೊಂಡು ಹೋಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು.ಇಷ್ಟು ಸೂಕ್ಷ್ಮ ಪ್ರಕರಣದ ತನಿಖೆಯ ಮಾಹಿತಿಯನ್ನು ಯಾರು ಹೊರಗೆ ಬಿಟ್ಟರು? ಯಾರೋ ಅತ್ಯಂತ ವ್ಯವಸ್ಥಿತವಾಗಿ, ಉದ್ದೇಶಪೂರ್ವಕವಾಗಿಯೇ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶವೇ ಇದೆ, ತನಿಖೆಯ ಮಾಹಿತಿ ಹೊರಗೆ ಬರಬಾರದು ಎಂದು. ಆದರೆ, ನ್ಯಾಯಾಲಯದ ಆದೇಶ ಇಲ್ಲಿ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.
ಇದೇ ಚುನಾವಣೆ ಸಮಯದಲ್ಲಿ ಈ ಬಾರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪಕ್ಷದ ನಾಲ್ಕೂ ಅಭ್ಯರ್ಥಿಗಳು ಸೋಲುತ್ತಾರೆ ಎಂದು ಸಿದ್ದರಾಮಯ್ಯ ಅವರು ನೂರು ಬಾರಿ ಹೇಳಿದ್ದಾರೆ. ಈ ಪೆನ್ ಡ್ರೈವ್ ಧೈರ್ಯದಿಂದ ಅವರು ಹೀಗೆ ಹೇಳಿದ್ದರು. ಈ ಪೆನ್ ಡ್ರೈವ್ ಹಿಂದೆ ಯಾರೆಲ್ಲ ಇದ್ದಾರೆ, ಅದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಅದುವರೆಗೂ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಗುಡುಗಿದರು.ಇದೇ ವೇಳೆ ನವೀನ್ ಗೌಡ ತನ್ನ ಗೆಳೆಯನ ಜತೆ ಪೆನ್ ಡ್ರೈವ್ ಹಂಚಿಕೆ ಕುರಿತು ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕುಮಾರಸ್ವಾಮಿ ಕೇಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಇತರರು ಉಪಸ್ಥಿತರಿದ್ದರು.
ಇದು ಬೆಳಗಾವಿ ಶಾಸಕರ ಸಿ.ಡಿ. ಹರಿಬಿಟ್ಟ ಗ್ಯಾಂಗ್‌ಹಿಂದೆ ಇದೇ ಗ್ಯಾಂಗ್ ಬೆಳಗಾವಿ ಶಾಸಕರೊಬ್ಬರ ಸಿ.ಡಿ. ಮಾಡಿ ಲೀಕ್ ಮಾಡಿತ್ತು. ₹30ರಿಂದ 40 ಕೋಟಿ ಖರ್ಚು ಮಾಡಿ ಈ ಮಹಾನಾಯಕನೇ ಅದನ್ನೆಲ್ಲಾ ಮಾಡಿದ್ದು. ಅಷ್ಟು ಕೋಟಿ ಖರ್ಚಾಯ್ತು ಅಂತ ಈ ಮಹಾನಾಯಕನೇ ಹೇಳಿರುವ ಆಡಿಯೋ ಇದೆ-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ