ರಾಮನಗರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಗಂಭೀರ ಸ್ವರೂಪ ಪಡೆಯುತ್ತಿದ್ದು ಅದರ ಪರಿಣಾಮದ ಬಿಸಿ ರಾಮನಗರದಲ್ಲಿಯೂ ಜೋರಾಗಿ ತಟ್ಟಿದೆ. ವಾಣಿಜ್ಯ ಸಿಲಿಂಡರ್ ಕೊರತೆ ನಡುವೆ ಇದೀಗ ಸಿಎನ್‌ಜಿ ಬಂಕ್‌ಗಳಲ್ಲಿ ಆಟೋ ಗ್ಯಾಸ್ ಅಭಾವ ತೀವ್ರವಾಗಿ ಮುಂದುವರಿದಿದ್ದು ಆಟೋ ಚಾಲಕರು ಬೀದಿಗೆ ಬೀಳುವ ಸ್ಥಿತಿ ಸೃಷ್ಟಿಯಾಗಿದೆ
ರಾಮನಗರ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಗಂಭೀರ ಸ್ವರೂಪ ಪಡೆಯುತ್ತಿದ್ದು ಅದರ ಪರಿಣಾಮದ ಬಿಸಿ ರಾಮನಗರದಲ್ಲಿಯೂ ಜೋರಾಗಿ ತಟ್ಟಿದೆ. ವಾಣಿಜ್ಯ ಸಿಲಿಂಡರ್ ಕೊರತೆ ನಡುವೆ ಇದೀಗ ಸಿಎನ್‌ಜಿ ಬಂಕ್‌ಗಳಲ್ಲಿ ಆಟೋ ಗ್ಯಾಸ್ ಅಭಾವ ತೀವ್ರವಾಗಿ ಮುಂದುವರಿದಿದ್ದು ಆಟೋ ಚಾಲಕರು ಬೀದಿಗೆ ಬೀಳುವ ಸ್ಥಿತಿ ಸೃಷ್ಟಿಯಾಗಿದೆ.
ನಗರದ ಹೊರವಲಯದ ಜಾನಪದ ಲೋಕದ ಬಳಿ ಇರುವ ಪ್ರೊಪೆಲ್ ಎಲ್‌ಪಿಜಿ ಬಂಕ್ ಎರಡು ದಿನಗಳಿಂದ ಬಂದ್ ಆಗಿತ್ತು. ಇಂದು ಸ್ಟಾಕ್ ಬಂದಿರುವ ಮಾಹಿತಿ ತಿಳಿದ ಕೂಡಲೇ ರಿಕ್ಷಾ ಚಾಲಕರು ಆಟೋಗಳೊಂದಿಗೆ ಬಂಕ್ ಮುಂದೆ ಸುಮಾರು 1 ಕಿ.ಮೀ ದೂರದಷ್ಟು ಕ್ಯೂ ನಿಂತಿದ್ದರು.
ಸಿಎನ್‌ಜಿ ಗ್ಯಾಸ್ ಬಂಕಿನ ಎದುರು ಇಡೀ ಹಗಲು ಕಾದು ಕುಳಿತರೂ ಆಟೋ ಗ್ಯಾಸ್ ಸಿಗದೆ ಚಾಲಕರು ಪರಿತಪಿಸುವಂತಾಗಿದೆ. ಗ್ಯಾಸ್ ಬಂಕ್ ಎದುರು ಕಿಲೋ ಮೀಟರ್ ಗಟ್ಟಲೇ ಆಟೋಗಳು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸಕಾಲಕ್ಕೆ ಆಟೋ ಗ್ಯಾಸ್ ಸಿಗದೆ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಚಾಲಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಗ್ಯಾಸ್ ಸಿಗದ ಕಾರಣ ಆಟೋ ಚಾಲಕರ ದುಡಿಮೆಗೆ ಪೆಟ್ಟು ಬೀಳುತ್ತಿದ್ದು ಕಣ್ಣೀರಿಡುವಂತೆ ಮಾಡಿದೆ. ಸ್ಟಾಕ್ ಇದ್ದರೂ ಒಮ್ಮೆ ಗ್ಯಾಸ್ ತುಂಬಿಸಲು ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರದಿ ಸಾಲಿನಲ್ಲಿ ನಿಲ್ಲುವುದರಿಂದ ದುಡಿಮೆ ಇಲ್ಲದೇ ದಿನದ ಅರ್ಧ ಸಮಯ ವ್ಯರ್ಥವಾಗುತ್ತಿದೆ ಎಂದು ಆಟೋ ಚಾಲಕರು ಅಳಲು ತೋಡಿ ಕೊಳ್ಳುತ್ತಿದ್ದಾರೆ.
ಇದರ ಜೊತೆಗೆ ಪ್ರತಿ ಲೀಟರ್ ಎಲ್‌ಪಿಜಿ ದರ ಕಳೆದ 20 ದಿನಗಳಲ್ಲಿ 13 ರುಪಾಯಿ ಏರಿಕೆಯಾಗಿದೆ. ಒಂದೆಡೆ ಎಲ್‌ಪಿಜಿ ದರ ಏರಿಕೆಯಾದರೆ, ಮತ್ತೊಂದೆಡೆ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಆಟೊಗಳಿಗೆ ಇಂಧನವೇ ಸಿಗದ ಸ್ಥಿತಿ ಎದುರಾಗಿದೆ. ಚಾಲಕರು ಆಟೊ ಓಡಿಸುವುದನ್ನು ಬಿಟ್ಟು, ತಾತ್ಕಾಲಿಕವಾಗಿ ಬೇರೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರಿಕ್ಷಾ ಚಾಲಕರು ಅಳಲು ತೋಡಿಕೊಂಡರು.
3ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ಹೊರವಲಯದ ಪ್ರೊಪೆಲ್ ಬಂಕ್ ಬಳಿ ಗ್ಯಾಸ್ ಗಾಗಿ ಆಟೋಗಳು ಸಾಲುಗಟ್ಟಿ ನಿಂತಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.