ಮಡಿಕೇರಿ: ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ ಅವಂದೂರು ಗ್ರಾಮದ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಸ್ವಾಮಿ ಹಾಗೂ ಗಣಪತಿ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಮೇ ೫ರಿಂದ ೮ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಶ್ರೀ ಪದ್ಮನಾಭ ತಂತ್ರಿಗಳಾದ ನೀಲೇಶ್ವರ ಉಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಮೇ ೫ರಂದು ಸಂಜೆ ೫ ಗಂಟೆಗೆ ತಂತ್ರಿಗಳ ಆಗಮನ, ೭ ಗಂಟೆಗೆ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಇತ್ಯಾದಿ ನಡೆಯಲಿದೆ.
ಮೇ ೬ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಾಭಿಷೇಕ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ೭ ಗಂಟೆಗೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಮೇ೭ರ ಬೆಳಿಗ್ಗೆ ೭ ಗಂಟೆಯಿಂದ ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ತತ್ವಹೋಮ, ಧ್ಯಾನ ಸಂಕೋಚ, ಶಯ್ಯಪೂಜೆ, ಜೀವೋದ್ಧಾಸನೆ ಇತ್ಯಾದಿ ನಡೆಯಲಿದೆ. ಮೇ ೮ರ ಬೆಳಿಗ್ಗೆ ೫ ಗಂಟೆಗೆ ಗಣಪತಿ ಹೋಮ, ೭.೨೮ರಿಂದ ೮.೩೭ರ ವೃಷಭ ಲಗ್ನದಲ್ಲಿ ಗೋಪಾಲಕೃಷ್ಣ ದೇವರ ಪೀಠ ಮತ್ತು ಬಿಂಬ ಪ್ರತಿಷ್ಠೆ, ಜೀವ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ ೧೧.೪೭ರ ಕರ್ಕಾಟಕ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಡೆಯಲಿದೆ.ಬ್ರಹ್ಮಕಲಶೋತ್ಸವ ಅಂಗವಾಗಿ ಮೇ ೮ ರಂದು ನಡೆಯುವ ಕಾರ್ಯಕ್ರಮಕ್ಕೆ ಹಾಸನದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮಹಾಲಕ್ಷ್ಮೀ ಸಂಸ್ಥಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಸದ ಕೃಷ್ಣದತ್ತ ಯದುವೀರ್ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಭಾಗವಹಿಸುವರು ಎಂದು ಮಾಹಿತಿ ನೀಡಿದರು.