ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಭಾರಿ ಅಂತರದಿಂದ ಸೋಲಿಸುವ ಮೂಲಕ ಕಾಂಗ್ರೆಸ್‌ನ ಉಮೇಶ ಮೇಟಿ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ತುಳಿದಿದ್ದಾರೆ. ನವನಗರದ ತೋಟಗಾರಿಕೆ ವಿವಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಅಭೂತಪೂರ್ವ ಗೆಲುವು ಕಂಡ ಉಮೇಶ ಮೇಟಿ ಅವರು ಹಿರಿಯ ರಾಜಕಾರಣಿ ದಿ.ಎಚ್.ವೈ.ಮೇಟಿ ಅವರ ಪುತ್ರರಾಗಿದ್ದು, ಅನುಕಂಪದ ಅಲೆ, ಜೊತೆಗೆ ಆಡಳಿತಾರೂಢ ಸರ್ಕಾರ ಜೊತೆಯಾಗಿದ್ದರಿಂದ ಈ ಗೆಲುವು ಸಾಧ್ಯವಾಗಿದೆ.ಸಂಭ್ರಮ- ವಿಜಯೋತ್ಸವ: ಆರಂಭಿಕ ಮುನ್ನಡೆಯೊಂದಿಗೆ ಗೆಲುವು ಕಂಡ ಉಮೇಶ ಮೇಟಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಹಿರಿಯರು ಕುಟುಂಬದ ಸದಸ್ಯರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರ, ನವನಗರ, ವಿದ್ಯಾಗಿರಿಯಲ್ಲಿ ಕೆಲವು ಯುವಕರು ಬೈಕ್ ರ್ಯಾಲಿ ಮಾಡಿ, ಗುಲಾಲ್ ಎರಚಿ, ಪಟಾಕಿ ಸಿಡಿಸಿ ಗೆಲುವು ಹಂಚಿಕೊಂಡರು.