ತಡೆಗೋಡೆ ನಿರ್ಮಾಣಕ್ಕೆ ಮುಂದಾಗಲಿ

KannadaprabhaNewsNetwork |  
Published : Jul 20, 2024, 12:49 AM IST
52 | Kannada Prabha

ಸಾರಾಂಶ

ಗುಂಡ್ಲು ತೀರದ ಬಡಾವಣೆಗಳಿಗೆ ಕಪಿಲಾ ನದಿ ಪ್ರವಾಹದ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲಾಗಿತ್ತು

ಕನ್ನಡಪ್ರಭ ವಾರ್ತೆ ನಂಜನಗೂಡು

ಪ್ರತೀ ವರ್ಷ ಮಳೆಗಾಲದಲ್ಲಿ ನಂಜನಗೂಡಿನ ತಗ್ಗು ಪ್ರದೇಶದ ಜನರು ಕಪಿಲಾ ನದಿ ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಪಡುತ್ತಿದ್ದಾರೆ ಜನರಿಗಾಗುತ್ತಿರುವ ಅನಾನುಕೂಲ ತಪ್ಪಿಸಲು ಕಪಿಲಾ ನದಿ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮಕ್ಕೆ ಮುಂದಾಗಲಿ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಒತ್ತಾಯಿಸಿದರು.

ಶುಕ್ರವಾರ ನಂಜನಗೂಡು ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ನಂಜನಗೂಡು ಪಟ್ಟಣದಲ್ಲಿ ಗುಂಡ್ಲು ನದಿಗೆ ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿ ಪಂಚಬೃಂದಾವನ ಸೇರಿದಂತೆ ಗುಂಡ್ಲು ತೀರದ ಬಡಾವಣೆಗಳಿಗೆ ಕಪಿಲಾ ನದಿ ಪ್ರವಾಹದ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲಾಗಿತ್ತು, ಜೊತೆಗೆ ಟಿ. ನರಸೀಪುರದಲ್ಲಿ ನದಿ ಪ್ರವಾಹ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸಲಾಗಿರುವ ಮಾದರಿಯಲ್ಲಿ ನಂಜನಗೂಡಿನಲ್ಲಿಯೂ ನದಿ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೀರಾವರಿ ಇಲಾಖೆ ಮೂಲಕ 50 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಕಪಿಲಾ ನದಿ ತೀರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ನಂಜನಗೂಡಿನ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಮುಂದಾಗಬೇಕು ಎಂದು ಹೇಳಿದರು.

ಇನ್ನು ನದಿ ಪ್ರವಾಹದ ನೀರಿನೊಂದಿಗೆ ಚರಂಡಿಗಳ ಕಲುಷಿತ ತ್ಯಾಜ್ಯಯುಕ್ತ ತ್ಯಾಜ್ಯದ ನೀರು ತಗ್ಗು ಪ್ರದೇಶದ ಬಡಾವಣೆಗಳಲ್ಲಿನ ಮನೆಗಳಿಗೆ ನುಗ್ಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದು, ಜನರ ಆರೋಗ್ಯ ರಕ್ಷಣೆಗೆ ತಾಲೂಕು ಆಡಳಿತದ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಜೊತೆಗೆ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಪಡೆದಿರುವ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.

ಪಟ್ಟಣದ ಬಜಾರ್ ರಸ್ತೆಯಲ್ಲಿ ತಾಲೂಕು ಆಡಳಿತದಿಂದ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ಥ ಕುಟುಂಬಗಳ ಸದಸ್ಯರೊಡನೆ ಸಮಾಲೋಚಿಸಿದರು.

ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯ ಮಹದೇವಪ್ರಸಾದ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಾಲಚಂದ್ರು, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ