ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪೇ ಆಟೋಗಳಿಂದ ನಿತ್ಯ ಸಾಮಾನ್ಯ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಈ ಮೊದಲು ಅಪ್ಪೇ ಆಟೋಗಳು ನಗರ ಮತ್ತು ಪಟ್ಟಣಗಳ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಈಗ ಅವುಗಳಿಗೆ ಅನುಮತಿ ಇಲ್ಲದಿದ್ದರೂ ಸಹ ನಗರ ಪ್ರದೇಶಗಳಲ್ಲಿ ಚಲಿಸುತ್ತಾ ತೊಂದರೆ ನೀಡುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ಆಟೋ ಚಾಲಕರ ನಡುವೆ ಘರ್ಷಣೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಸಾರಿಗೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆವಿಗೂ ಅದು ಕಾರ್‍ಯಗತವಾಗಿಲ್ಲ. ಮಂಡ್ಯ ನಗರದಲ್ಲಿ 4 ಸಾವಿರಕ್ಕೂ ಹೆಚ್ಚು ಪರವಾನಗಿ ಹೊಂದಿರುವ ಆಟೋಗಳಿವೆ. ಹೊಸದಾಗಿ ಪರವಾನಗಿ ನೀಡುತ್ತಿರುವುದರಿಂದ ಹಾಲಿ ಇರುವ ಆಟೋ ಚಾಲಕರಿಗೆ ಅನಾನುಕೂಲವಾಗುತ್ತಿದೆ ಎಂದು ದೂರಿದರು.ಇರುವ ಆಟೋಗಳಿಗೆ ಬಾಡಿಗೆ ಇಲ್ಲ. ಕಡಿಮೆ ಸಂಪಾದನೆ ಮಾಡಿ ಜೀವನ ಮಾಡುವುದೇ ದುಸ್ತರವಾಗಿದೆ. ಇದರಿಂದಾಗಿ ಹೊಸದಾಗಿ ಆಟೋಗಳಿಗೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಕೆ.ಆರ್.ರವೀಂದ್ರ ಮಾತನಾಡಿ, ಮಂಡ್ಯ ನಗರ ವ್ಯಾಪ್ತಿಯಲ್ಲಿ ಆಟೋ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಬಹಳಷ್ಟು ಸಮಸ್ಯೆಗಳಿವೆ. ರಸ್ತೆಗಳ ಅಗಲೀಕರಣ ಮಾಡಿಲ್ಲ. ಕೆಲವೆಡೆ ರಸ್ತೆಗಳನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಇರಲಿ, ರಸ್ತೆಗಳಲ್ಲಿರುವ ಹಳ್ಳಗಳನ್ನು ಮುಚ್ಚುವ ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.
ರಸ್ತೆ ಮಧ್ಯದಿಂದ 21 ಮೀಟರ್ ರಸ್ತೆ ಅಗಲೀಕರಣ ಆಗಬೇಕು. ಜಯಚಾಮರಾಜ ವೃತ್ತ 151 ಅಡಿ ವಿಸ್ತಾರ ಇರಬೇಕು. ಎಲ್ಲವೂ ಒತ್ತುವರಿಯಾಗಿದೆ. ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿ ತಹಸೀಲ್ದಾರ್ ಪೆಟ್ರೋಲ್ ಕಂಪನಿಗೆ ನಿಯಮಬಾಹಿರವಾಗಿ ಜಾಗ ನೀಡಿದ್ದಾರೆ. ಮಹಾವೀರ ವೃತ್ತದಲ್ಲಿ ಮಿಲ್ಕ್ ಪಾರ್ಲರ್‌ನವರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಒತ್ತುವರಿಯಾಗಿದೆ. ಈ ಬಗ್ಗೆ ಶೀಘ್ರ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಎಂ.ರಾಜು, ರವಿಕುಮಾರ್, ಕುಮಾರ, ಬೋರಲಿಂಗ, ಶಶಿ, ಜಯಶಂಕರ ಸೇರಿದಂತೆ ಹಲವರು ಇದ್ದರು.