ಕನ್ನಡಪ್ರಭ ವಾರ್ತೆ ಚಾಮರಾಜನಗರಖಾಸಗಿ ಡೇರಿಗಳ ಹಾವಳಿಗಳನ್ನು ಪರಿಣಾಮಕಾರಿಯಾಗಿ ತಡೆಯುವ ಜೊತೆಗೆ ಗುಣಮಟ್ಟದ ಹಾಲು ಶೇಖರಣೆಗೆ ಕಾರ್ಯ ನಿರ್ವಾಹಕರು ಹೆಚ್ಚಿನ ಅದ್ಯತೆ ನೀಡಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.ಜಿಲ್ಲೆಯ ಗುಂಡ್ಲುಪೇಟೆ ಮತ್ತು ಹನೂರು ತಾಲೂಕು ಬಿಎಂಸಿ ಕೇಂದ್ರಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಕುರಿತು ಕುಶಾಲನಗರದ ವೀರಭೂಮಿ ರೆಸಾರ್ಟ್‌ನಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಹಕಾರ ಕ್ಷೇತ್ರಗಳಲ್ಲಿ ಪೈಪೋಟಿ ಜಾಸ್ತಿಯಾಗುತ್ತಿದೆ. ಸಂಘದ ಅಸ್ತಿತ್ವ ಉಳಿಸಿಕೊಳ್ಳಲು ಸವಲತ್ತು ಹಾಗೂ ಸೌಲಭ್ಯಗಳನ್ನು ನೀಡುವುದು ಮುಖ್ಯವಾಗಿದೆ. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿ ಶಿಕ್ಷಣ, ತರಬೇತಿ ಹಾಗೂ ಜಾಗೃತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಒಕ್ಕೂಟ ಗುಣಾತ್ಮಕವಾಗಿ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಮತ್ತೋರ್ವ ನಿರ್ದೇಶಕ ಬಿ. ಜಯಕರಶೆಟ್ಟಿ ಇಂದ್ರಾಣಿ ಮಾತನಾಡಿ, ಎಲ್ಲರಲ್ಲೂ ಸಾಮರ್ಧ್ಯ ಇರುತ್ತದೆ. ನಮ್ಮಲ್ಲಿರುವ ಕೀಳಿರಿಮೆಯನ್ನು ಬಿಟ್ಟು ಇಂತಹ ತರಬೇತಿಯಲ್ಲಿ ಭಾಗವಹಿಹಿಸಿ. ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಿ ಎಂದರು.ಮೈಸೂರಿನ ತರಬೇತಿ ಕೇಂದ್ರದ ಎಚ್.ಎಂ. ಮಹದೇವಸ್ವಾಮಿ, ಹಾಲಿನ ಗುಣಮಟ್ಟ ಸುಧಾರಣೆ, ಮಡಿಕೇರಿಯ ಕೆಐಸಿಎಂ ಡಾ. ಆರ್. ಎಸ್. ರೇಣುಕಾ ಸಿಇಒಗಳ ಕರ್ತವ್ಯ ಮತ್ತು ಜವಾಬ್ದಾರಿಗಳು, ಸಾಧನಾ ಸಂಸ್ಥೆ ಯ ನಿರ್ದೇಶಕ ಟಿ.ಜೆ.ಸುರೇಶ್ ಒತ್ತಡ ನಿರ್ವಹಣೆ ಮತ್ತು ಸಮಯ ನಿರ್ವಹಣೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್, ಜಿಲ್ಲಾಸಹಕಾರ ಒಕ್ಕೂಟದ ಉಪಾಧ್ಯಕ್ಷ ರಾಯಪ್ಪನ್, ನಿರ್ದೇಶಕ ಮುದ್ದಯ್ಯ, ಎಚ್.ಎನ್. ಸುಂದರ ರಾಜ್, ಎಚ್.ಎಂ. ಬಸವಣ್ಣ, ಎಂ.ಎಂ.ನಾಗರಾಜು, ಪ್ರಭುಸ್ವಾಮಿ, ಎಂ.ರವಿ, ಪಿ. ಮಹದೇವಸ್ವಾಮಿ ಎಚ್.ಎಂ. ಮಹದೇವಪ್ರಭು, ಒಕ್ಕೂಟದ ಸಿಇಓ ಮನುಜ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ಕೆಂಡಗಣ್ಣ ಇತರರು ಇದ್ದರು.