ಗಾಣಿಗ ಸಮಾಜದ ಬೇಡಿಕೆ ಈಡೇರಿಕೆಗೆ ಪ್ರಯತ್ನ

KannadaprabhaNewsNetwork | Published : Feb 25, 2024 1:49 AM

ಸಾರಾಂಶ

ಇಂಡಿ ಗಾಣಿಗ ಸಮಾಜದ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ ಗಾಣಿಗ ಸಮಾಜದ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.ಪಟ್ಟಣದಲ್ಲಿ ಗಾಣಿಗ ಸಮಾಜ ಶನಿವಾರ ಹಮ್ಮಿಕೊಂಡ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮೀಜಿ ಸಭಾ ಭವನದ ಭೂಮಿಪೂಜೆ ಮತ್ತು ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗಾಣಿಗ ಸಮಾಜ ಕಾಯಕದ ಜೊತೆ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಜ್ಞಾನದ ಶಬ್ದಕೋಶದ ಅರ್ಥವೇ ಸಿದ್ಧೇಶ್ವರ ಶ್ರೀಗಳು. ಜ್ಞಾನ ಬಂಡಾರದ ಕಣಿಜವೇ ಆಗಿದ್ದರು. ನಿಸರ್ಗದ ಬಗ್ಗೆ ಕಳಕಳಿ, ರೈತರ ಮೇಲಿನ ಕಾಳಜಿ, ನಿಸ್ವಾರ್ಥ ಭಾವನೆ ಶ್ರೀಗಳಲ್ಲಿ ಇತ್ತು. ಇಂಗ್ಲಿಷ್‌ ಸಾಹಿತ್ಯದ ಮೇಲೆ ಪಾಂಡಿತ್ಯ ಹೊಂದಿ, ಬ್ರಿಟೀಷರು ಮಾತಾಡಲಾದ ಇಂಗ್ಲಿಷ್‌ ಶಬ್ದ ಬಂಡಾರ ಎಂದು ಬಣ್ಣಿಸಿದರು.ಸಿದ್ಧೇಶ್ವರ ಶ್ರೀಗಳು ನಿಸರ್ಗದ ಮೇಲೆ ಪ್ರೀತಿ ಹೊಂದಿದ್ದರು. ಹೀಗಾಗಿ ಅವರ ಸಂಕಲ್ಪದಂತೆ ಸ್ಮಾರಕವಾಗುವಂತೆ ಸಾವಿರ ಎಕರೆ ಜಾಗದಲ್ಲಿ ಅರಣ್ಯ ಪ್ರದೇಶ ನಿರ್ಮಾಣದ ಜೊತೆಗೆ ವಿಜ್ಞಾನ ಬೆಳೆಸುವ ಕೆಲಸ ಮಾಡಲಾಗುತ್ತದೆ ಎಂದರು.ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 50 ಲಕ್ಷ ಗಾಣಿಗ ಸಮಾಜದವರಿದ್ದು, ರಾಜಕೀಯವಾಗಿ, ಶೈಕ್ಷಣಿವಾಗಿ, ಆರ್ಥಿಕವಾಗಿ ಹಿಂದೆ ಇದೆ. 2ಎ ಮೀಸಲಾತಿಯಿಂದ ವಂಚಿತಗೊಂಡಿದ್ದು, ಬಲಿಷ್ಠ ಜನಸಂಖ್ಯೆ ಹೊಂದಿದ ಸಮಾಜಗಳಿಗೆ ಸರ್ಕಾರ ಮಣಿ ಹಾಕುತ್ತಿದೆ. ಇಂದು ಗಾಣಿಗ ಸಮಾಜ ಸಂಘಟನೆ ಅನಿವಾರ್ಯ ಎಂದು ತಿಳಿಸಿದರು.ಬಿ.ಜಿ.ಪಾಟೀಲ ಹಲಸಂಗಿ, ಸಿದ್ದಲಿಂಗ ಹಂಜಗಿ, ಬಾಗಲಕೋಟೆ ಎಂಪಿ ಪಿ.ಸಿ.ಗದ್ದಿಗೌಡರ ಮಾತನಾಡಿದರು. ಗಾಣಿಗ ಗುರುಪೀಠದ ಜಗದ್ಗುರು ಡಾ.ಜಯಬಸವ ಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಂಕರನಾಂದ ಸ್ವಾಮೀಜಿ, ಮಾತೋಶ್ರೀ ಸುಗಲಮ್ಮ ತಾಯಿ, ತೇಜವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ, ಕೆ.ಸಿ.ವಿರೇಂದ್ರ(ಪಪ್ಪಿ), ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರ, ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ, ಶೀಲವಂತ ಉಮರಾಣಿ, ರಾಜು ಆಲಗೂರ, ಬಾಬುಸಾಹುಕಾರ ಮೇತ್ರಿ, ಶಿವಯೋಗೆಪ್ಪ ನೇದಲಗಿ, ಜಿ.ಎಸ್‌.ನ್ಯಾಮಗೌಡ, ಸೌಮ್ಯ ಕಲ್ಲೂರ, ಶಕುಂತಲಾ ಕಲ್ಲೂರ, ಸಿದ್ದಲಿಂಗ ಹಂಜಗಿ, ಬಿ.ಬಿ.ಪಾಸೋಡಿ, ಎ.ಎಸ್‌.ಗಾಣಿಗೇರ, ಸುಭಾಷ ಹಿಟ್ನಳ್ಳಿ, ಬತ್ತು ಸಾಹುಕಾರ ಹಾವಳಗಿ, ಡಾ.ಅಶೋಕ ಪಾಟೀಲ, ಸಿದ್ದಣ್ಣ ಸಾಹುಕಾರ, ರೇವಗೊಂಡಪ್ಪಗೌಡ ಪಾಟೀಲ, ಶ್ರೀಶೈಲ ಗಿಣ್ಣಿ, ಭೀಮನಗೌಡ ಪಾಟೀಲ, ರಾಮು ಯಂಕಂಚಿ, ಶ್ರೀಶೈಲ ಹಂಜಗಿ, ಆನಂದ ಬಿರಾದಾರ, ಪ್ರದೀಪ ಉಟಗಿ, ವಿನೋದ ದೊಡ್ಡಗಾಣಿಗೇರ, ಶಿವಯೋಗೆಪ್ಪ ಚನಗೊಂಡ, ಎಂ.ಎಸ್‌.ಅಂಕಲಗಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಿದ್ಧೇಶ್ವರ ಮಂಗಲ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ ನೀಡಿದ ಶಾಸಕ ಯಶವಂತರಾಯಗೌಡ ಪಾಟೀಲರನ್ನು ಗಾಣಿಗ ಸಮಾಜದಿಂದ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು. ಬಾಕ್ಸ್‌..ಸಮಾಜದ ಮುಖ್ಯ ಬೇಡಿಕೆಗಳು1) ವಿಜಯಪುರದಲ್ಲಿರುವ ಆರುವರೇ ಎಕರೆ ಪ್ರದೇಶದಲ್ಲಿರುವ ಮಠಕ್ಕೆ ₹50 ಕೋಟಿ ನೀಡಿ ಮಠ ಅಭಿವೃದ್ಧಿ ಪಡಿಸಬೇಕು. ಅಲ್ಲಿ ಆಧ್ಯಾತ್ಮೀಕ, ಶೈಕ್ಷಣಿಕ ಚಿಂತನೆಗಳು ನಡೆಯುವ ವಾತಾವರಣ ನಿರ್ಮಾಣ ಮಾಡಬೇಕು.

2) ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಗಾಣಿಗ ಸಮಾಜ ಅಭಿವೃದ್ಧಿ ಹೊಂದಲು,ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.

3) ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಎಸ್‌.ಸಿ.ಬಾಳೆಕುಂದ್ರಿ ಅವರ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಬಡ ಗಾಣಿಗ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಬೇಕು.

---------------------ಕೋಟ್‌.....ಪ್ರಧಾನಿ ಮೋದಿ ಸ್ವಚ್ಛ ಭಾರತ ಮೀಷನ್‌ಕ್ಕಿಂತ ಮುಂಚೆಯೇ ಸಿದ್ಧೇಶ್ವರ ಶ್ರೀಗಳು ಮನ, ಮನೆ, ಗ್ರಾಮ ಸ್ವಚ್ಛವಾಗಿರಬೇಕೆಂದು ಹೇಳಿದ್ದರು. ಇಂದು ಸ್ವಚ್ಛ ಭಾರತ ಯೋಜನೆ ಹೆಸರಿನಲ್ಲಿ ಕೈಯಲ್ಲಿ ಪೊರಕೆ ಹಿಡಿದು ಫೋಟೋಗೆ ಪೋಸ್ ಕೊಡುವ ಕೆಲಸವಾಗುತ್ತಿದೆ.

-ಎಂ.ಬಿ.ಪಾಟೀಲ, ಸಚಿವರು.-------------------ರಾಜ್ಯದಲ್ಲಿಯೇ ಯಾವ ಶಾಸಕರು ನೀಡದಷ್ಟು ₹5 ಕೋಟಿ ಅನುದಾನವನ್ನು ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ಮಂಗಲ ಭವನ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ನೀಡಿದ್ದಾರೆ. ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಮಂಗಲ ಭವನದಲ್ಲಿ ಶ್ರೀಗಳನ್ನು ಸ್ಮರಿಸುವ ಕಾರ್ಯ ನಡೆಯಬೇಕು. ಪೂಜ್ಯರ ಹೆಸರಿಗೆ ಚ್ಯುತಿ ಬರದ ಹಾಗೆ ಸಂಘಟಕರು ನಿಗಾ ವಹಿಸಬೇಕು.

-ಮಲ್ಲಿಕಾರ್ಜುನ ಲೋಣಿ, ಗಾಣಿಗ ಸಂಘದ ಕಾರ್ಯಾಧ್ಯಕ್ಷರು.

Share this article