ಸರ್ಕಾರಿ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಿ: ಸಚಿವ ಕೆ.ಎಚ್.ಮುನಿಯಪ್ಪ

KannadaprabhaNewsNetwork | Published : Sep 4, 2024 1:50 AM

ಸಾರಾಂಶ

ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕೆ ಅಲೆದಾಟವನ್ನು ಅಧಿಕಾರಿಗಳು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳಿಗೆ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕೆ ಅಲೆದಾಟವನ್ನು ಅಧಿಕಾರಿಗಳು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂ.ಗ್ರಾ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಸಮಸ್ಯೆಗೆ ಸಂಬಂಧಿಸಿ ರೈತರು ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿದರೆ ಗರಿಷ್ಠ 15 ದಿನಗಳ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಅಥವಾ ಅರ್ಜಿಗೆ ಸ್ಪಂದನೆ ಅಥವಾ ಉತ್ತರ ಸಿಗುವ ಹಾಗೆ ಅಧಿಕಾರಿಗಳು ಕೆಲಸ ಮಾಡಿದಲ್ಲಿ ಕರ್ನಾಟಕವು ದೇಶದಲ್ಲಿ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಹಾಗಾಗಿ ಅಧಿಕಾರಿಗಳ ಮನೋಸ್ಥಿತಿ ಬದಲಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನಾವು ನೀವು ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು.ಗ್ರಾಮೀಣ ಹಾಗೂ ನಗರ ಪ್ರದೇಶದ ಹಲವೆಡೆ ಸ್ಮಶಾನಕ್ಕೆ ತೆರಳಲು ರಸ್ತೆಗಳ ಸಮಸ್ಯೆ ಇಂದಿಗೂಸಮಸ್ಯೆಯಾಗಿ ಉಳಿದಿದೆ. ರಸ್ತೆ ಇಲ್ಲದ ಸ್ಮಶಾನಕ್ಕೆ ಸರ್ಕಾರವೇ ಖಾಸಗಿ ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ತೆರಳಲು ಶಾಶ್ವತ ಪರಿಹಾರ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಆದೇಶ ಹೊರಡಿಸಬೇಕು ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಿಧಾನಪರಿಷತ್ ಸದಸ್ಯ ಎಸ್.ರವಿ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ್ ಸುನಿಲ್ ಕುಮಾರ್, ಭೂ ಮಾಪನ ಮತ್ತು ಕಂದಾಯ ವ್ಯವಸ್ಥೆಯ ಆಯುಕ್ತ ಜೆ.ಮಂಜುನಾಥ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಕೆ.ಬಿ.ಶಿವಕುಮಾರ್, ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆ ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್, ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Share this article