ರೈತರಿಗೆ ನೀಡುವ ಹಾಲಿನ ದರ ಇಳಿಕೆ ವಿರೋಧಿಸಿ ರೈತ ಸಂಘಟನೆಯಿಂದ ಪ್ರತಿಭಟನೆ

KannadaprabhaNewsNetwork |  
Published : Sep 04, 2024, 01:50 AM IST
ಕಾರಟಗಿಯಲ್ಲಿ ಮಂಗಳವಾರ ರೈತ ಸಂಘಟನೆ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಬರೆದ ಮನವಿಯನ್ನು ಹಸುವಿನ ಬಾಯಿಯಲ್ಲಿಟ್ಟು ಸರಕಾರಕ್ಕೆ ಸಲ್ಲಿಸಿದರು. | Kannada Prabha

ಸಾರಾಂಶ

ಹಾಲಿನ ಖರೀದಿ ದರ ಇಳಿಕೆ ಮಾಡುವ ಮೂಲಕ ರೈತರಿಗೆ ಬರೆ ಎಳೆದಿರುವ ಹಾಲು ಒಕ್ಕೂಟಗಳ ನಿರ್ಧಾರ ವಿರೋಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ರಾಬಕೋ ಹಾಲು ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಹಾಲಿನ ಖರೀದಿ ದರ ಇಳಿಕೆ ಮಾಡುವ ಮೂಲಕ ರೈತರಿಗೆ ಬರೆ ಎಳೆದಿರುವ ಹಾಲು ಒಕ್ಕೂಟಗಳ ನಿರ್ಧಾರ ವಿರೋಧಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ರಾಬಕೋ ಹಾಲು ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಬಸ್ ನಿಲ್ದಾಣದ ಬಳಿಯ ಬಳಿ ಸೇರಿದ್ದ ರೈತ ಸಂಘಟನೆಗಳ ಕಾರ್ಯಕರ್ತರು ಹಸು ಹಾಗೂ ಎಮ್ಮೆಗಳೊಂದಿಗೆ ಬೀದಿಗೆ ಇಳಿದು ಪ್ರತಿಭಟಿಸಿ ಹಾಲು ಒಕ್ಕೂಟದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ರೈತ ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿವೆ. ಇಂಥ ರೈತ ಸಮೂಹದ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಹಾಲಿನ ಮಾರಾಟ ದರ ಹೆಚ್ಚಿಗೆ ಮಾಡುತ್ತಾ ಬಂದಿರುವ ಸರ್ಕಾರ, ಮತ್ತೊಂದಡೆ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಒಂದೂವರೆ ರು. ಕಡಿತ ಮಾಡುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟ ಹಾಲು ಉತ್ಪಾದಕ ರೈತರಿಗೆ ಮೊದಲು ಪ್ರತಿ ಲೀಟರ್ ಹಾಲಿಗೆ ₹೩೨ ನೀಡುತ್ತಿತ್ತು. ಈಗ ಏಕಾಏಕಿ ಒಂದೂವರೆ ರು. ಕಡಿತ ಮಾಡಿದ್ದು ₹೩೨ ಇದ್ದ ಹಾಲಿನ ದರ ₹೩೦.೫೦ಕ್ಕೆ ಕುಸಿದಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದು ಮನುಷ್ಯರಿಂದ ಹಿಡಿದು ಪಶುಗಳ ಆಹಾರದವರೆಗೆ ಎಲ್ಲ ದರಗಳನ್ನು ಏರಿಕೆ ಮಾಡಿದೆ. ಈಗ ರೈತರಿಗೆ ಕೊಡುವ ಹಾಲಿನ ದರವನ್ನು ಕಡಿಮೆ ಮಾಡುವ ಮೂಲಕ ರೈತರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಸರ್ಕಾರ ಕೊಡುವ ಗ್ಯಾರಂಟಿ ಹಣವೂ ಬೇಡ, ಉಚಿತ ಪ್ರವಾಸವೂ ಬೇಡ, ನಮ್ಮ ರೈತರ ಕಷ್ಟಕ್ಕೆ ಸರಿಯಾದ ಬೆಲೆ ಕೊಡಿ ಎಂದ ಒತ್ತಾಯಿಸಿದರು.

ನಂತರ ತಾಲೂಕು ಅಧ್ಯಕ್ಷ ನಾರಾಯಣ ಈಡಿಗೇರ್ ಮಾತನಾಡಿ, ಕೂಡಲೇ ಹಾಲು ಉತ್ಪಾದಕರಿಗೆ ಕಡಿಮೆ ಮಾಡಿರುವ ಖರೀದಿ ದರದ ಆದೇಶವನ್ನು ಹಾಲು ಒಕ್ಕೂಟಗಳು ವಾಪಸ್ಸು ಪಡೆಯಬೇಕು. ಜೊತೆಗೆ ಸರ್ಕಾರ ಈ ಕೂಡಲೇ ಹಾಲು ಉತ್ಪಾದಕರಿಗೆ ಏಳೆಂಟು ರೂಪಾಯಿಗಳನ್ನು ಹೆಚ್ಚು ಮಾಡಿ ಕನಿಷ್ಠ ₹೪೦ ನೀಡಬೇಕು ಎಂದು ಆಗ್ರಹಿಸಿದರು.ಕಂದಾಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ತೋಳದ್, ಹಂಪೇಶ್ ಹರಗಲ್, ದೊಡ್ಡನಗೌಡ, ಮುದಿಯಪ್ಪ ಚಲುವಾದಿ, ಮರಿಯಪ್ಪ ಸಾಲೋಣಿ, ರವಿ ನಾಯಕ, ವಿಕಾಸ ಮುಳ್ಳೂರು ಪರಸಪ್ಪ ನಾಗನಕಲ್, ಪರಸಪ್ಪ ಮಡಿವಾಳ, ಬಾಷಾಸಾಬ ಬಂಡಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ