ಗದಗ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಾಯತ ಪ್ರಗತಿಶೀಲ ಸಂಘದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿದ ದತ್ತಿ ನಿಧಿಯಿಂದ ತಾಯಿಯ ಮಹತ್ವ ಹಾಗೂ ಗೌರವ ಹೆಚ್ಚಿಸುವಲ್ಲಿ ಹಾಗೂ ಸಮಾಜದಲ್ಲಿ ಹೆತ್ತವರ ಬಗ್ಗೆ ಅರಿವು ಮೂಡಿಸಲು ದತ್ತಿನಿಧಿ ಸಾಕಷ್ಟು ಪ್ರೇರಕ ಶಕ್ತಿಯಾಗಿದೆ ಎಂದು ಜ. ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಶಿವಾನುಭವದ ಸಾನ್ನಿಧ್ಯ ವಹಿಸಿ ಅವ್ವ ಸೇವಾ ಟ್ರಸ್ಟ್‌ನವರು ಹೆಚ್ಚುವರಿಯಾಗಿ ನೀಡಿದ ₹3 ಲಕ್ಷ ದತ್ತಿನಿಧಿ ಚೆಕ್‌ನ್ನು ಸಂಚಾಲಕ ಡಾ. ಬಸವರಾಜ ಧಾರವಾಡ ಅವರಿಂದ ಸ್ವೀಕರಿಸಿ ಮಾತನಾಡಿದರು.ಅವ್ವ ಸೇವಾ ಟ್ರಸ್ಟ್ ಈಗಾಗಲೇ ಕಳೆದ 4 ವರ್ಷಗಳ ಹಿಂದೆ ₹1.10 ಲಕ್ಷ ನೀಡಿ ದತ್ತಿನಿಧಿ ಸ್ಥಾಪಿಸುವ ಮೂಲಕ ಪ್ರತಿವರ್ಷ ನಡೆಯುವ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಸ್ಮರಣಾರ್ಥ ಅವ್ವನ ಕುರಿತು ನಡೆಯುವ ವಿಶೇಷ ಶಿವಾನುಭವದಲ್ಲಿ ಹೆತ್ತವರ ಮಹತ್ವದ ಅರಿವು ಮೂಡಿಸುವ ಕಾರ್ಯಕ್ಕೆ ಈ ದತ್ತಿನಿಧಿ ಸಾಕಷ್ಟು ಪ್ರೇರಕ ಶಕ್ತಿಯಾಗಿದೆ. ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯ ಮೆಚ್ಚಿ ಬಸವರಾಜ ಹೊರಟ್ಟಿ ಮತ್ತೇ ಹೆಚ್ಚುವರಿಯಾಗಿ ಟ್ರಸ್ಟ್‌ಗೆ ₹3 ಲಕ್ಷ ನೀಡುವ ಮೂಲಕ ಇನ್ನಷ್ಟು ಕಾರ್ಯ ಮಾಡಲು ಸಹಕರಿಸಿದ್ದು ಅಭಿನಂದನಾರ್ಹ ಎಂದರು.
ಅವ್ವ ಸೇವಾ ಟ್ರಸ್ಟ ಸಂಚಾಲಕ ಡಾ.ಬಸವರಾಜ ಧಾರವಾಡ ಮಾತನಾಡಿ, ಕಳೆದ 14 ವರ್ಷಗಳಿಂದ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಅಸಹಾಯಕರಿಗೆ ಆಸರೆಯಾಗಿ, ಪ್ರತಿಭಾವಂತರಿಗೆ ಪ್ರೇರಕ ಶಕ್ತಿಯಾಗಿ, ಎಲ್ಲ ವರ್ಗದ ನೋಂದವರಿಗೆ ಅಭಯದ ಹಸ್ತ ಚಾಚುತ್ತ ಬರುವ ಮೂಲಕ ಅವ್ವನ ಪ್ರೀತಿ ಹಂಚಿದೆ. ಇತ್ತೀಚೆಗೆ ಹೆತ್ತವರ ಬಗ್ಗೆ ಉದಾಸೀನ ತಾಳುತ್ತಿರುವ ಬಗ್ಗೆ ಹೆತ್ತವರ ಮಹತ್ವದ ಅರಿವು ಮೂಡಿಸುವ ಮಹತ್ವದ ಕಾರ್ಯ ನಾಡಿನಾದ್ಯಂತ ಮಾಡುತ್ತಾ ಬಂದಿದೆ. ಶ್ರೀಮಠದಲ್ಲಿ ಸ್ಥಾಪಿಸಿದ ದತ್ತಿನಿಧಿ ಟ್ರಸ್ಟ್ ಬಳಗಕ್ಕೆ ಸಾರ್ಥಕತೆ ತಂದಿದೆ ಎಂದರು.ಈ ವೇಳೆ ಡಿ.ಡಿ.ಪಿ.ಐ ಆರ್.ಎಸ್.ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ, ವಿ.ವಿ.ನಡುವಿನಮನಿ, ಚಂದ್ರಶೇಖರ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಮುಂತಾದವರು ಉಪಸ್ಥಿತರಿದ್ದರು.