ಮೂಲ್ಕಿ: ಕನ್ನಡಿಗರ ಮಕ್ಕಳಿಗೆ ಕನ್ನಡ ಬರುತ್ತಿಲ್ಲ. ಸರ್ಕಾರ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೀಡುತ್ತಿಲ್ಲ. ವರ್ಷಕ್ಕೆ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿದ್ದು ಕಾಸರಗೋಡಿನಲ್ಲಿ ಕನ್ನಡವನ್ನು ಅಳಿಸುವ ಕಾರ್ಯ ನಡೆಯುತ್ತಿದೆ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಪುಸ್ತಕಗಳನ್ನು ಕೊಂಡು ಕೊಂಡಾಡಬೇಕೆಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು. ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಮೂವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಕೊಡುಗೆ ಕೊಟ್ಟಿರುವ ಡಾ. ರಮಾನಂದ ಬನಾರಿ ಹಾಗೂ ಹೊನ್ನಾಳಿಯ ಯು. ಎನ್. ಸಂಗನಾಳಮಠ ಅವರಿಗೆ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ವಾಂಸ ಕೆ. ಎಲ್. ಕುಂಡಂತಾಯ, ಕ್ಯಾಪ್ಸ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸಿ ಎ ಚಂದ್ರಶೇಖರ ಶೆಟ್ಟಿ, ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಮತ್ತಿತರರು ಉಪಸ್ತಿತರಿದ್ದರು. ಪ್ರಕಾಶ ಆಚಾರ್, ಅನಿಕೇತ ಉಡುಪ ನಿರೂಪಿಸಿದರು. ಆಶ್ವೀಜ ಉಡುಪ ಭಾವಗೀತೆ ಹಾಡಿದರು. ಸುರೇಶ್ ಅತ್ತೂರು ಗಮಕ ವಾಚನ ಮಾಡಿದರು. ವಿದುಷಿ ರಶ್ಮಿ ಉಡುಪ ಬಳಗದವರಿಂದ ಭರತನಾಟ್ಯ ಹಾಗೂ ಉಡುಪಿ ಕಲಾರಂಗದ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಿತು.