ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭ

KannadaprabhaNewsNetwork |  
Published : Nov 26, 2025, 03:00 AM IST
24ಕಲಾರಂಗಉಡುಪಿ ಯಕ್ಷಗಾನ ಕಲಾರಂಗದ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಿತು | Kannada Prabha

ಸಾರಾಂಶ

ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಭಾನುವಾರ ಜರುಗಿತು.

ಉಡುಪಿ: ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಭಾನುವಾರ ಜರುಗಿತು.ಸಾನಿಧ್ಯ ವಹಿಸಿದ್ದ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶತಮಾನಗಳಿಂದಲೂ ಸಮಾಜವನ್ನು ತಿದ್ದುವಲ್ಲಿ ಯಕ್ಷಗಾನ ಕಲೆ ಗಣನೀಯ ಪಾತ್ರ ವಹಿಸಿದೆ. ಯಕ್ಷಗಾನ ಕಲಾರಂಗ ಸಾಮಾಜಿಕ ಸಾಂಸ್ಕೃತಿಕ ಕೆಲಸಗಳನ್ನು ಮಾಡುವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಅನುಗ್ರಹ ಸಂದೇಶದಲ್ಲಿ ನುಡಿದರು.ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ. ಜಿ. ಶಂಕರ್ ಪ್ರಶಸ್ತಿ ಪ್ರದಾನ ಮಾಡಿ ಯಕ್ಷಗಾನ ಕಲಾರಂಗದ ಸಾಧನೆಗೆ ಅಭಿನಂದಿಸಿದರು. ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್ ಮಾತನಾಡಿ ಕಲಾರಂಗವು ನಮ್ಮ ಬ್ಯಾಂಕಿನ ಅತ್ಯತ್ತಮ ಗ್ರಾಹಕ ಸಂಸ್ಥೆಯಾಗಿದ್ದು, ಈ ಹಿಂದಿನಂತೆ ನಮ್ಮ ಬ್ಯಾಂಕ್ ಸಂಸ್ಥೆಗೆ ನೆರವು ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.ಯಕ್ಷರಂಗಾಯಣದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್, ಉದ್ಯಮಿ ಹರೀಶ್ ರಾಯಸ್, ಖ್ಯಾತ ವೈದ್ಯ ಡಾ. ಕಬ್ಯಾಡಿ ಹರಿರಾಮ ಆಚಾರ್ಯ, ಕೆ. ಎಂ. ಉಡುಪ ಟ್ರಸ್ಟ್‌ನ ವಿಶ್ವಸ್ಥ ಕೆ. ಮಹೇಶ್ ಉಡುಪ, ಕೃಷಿತಜ್ಞರಾದ ಡಾ. ಪಡಾರು ರಾಮಕೃಷ್ಣ ಶಾಸ್ತ್ರಿ ಅಭ್ಯಾಗತರಾಗಿ ಭಾಗವಹಿಸಿದ್ದರು.೨೩ ಕಲಾವಿದರನ್ನು ತಲಾ ರೂ. ೨೦ ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿದರು. ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ 1 ಲಕ್ಷ ರು. ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇತ್ತೀಚಿಗೆ ನಿಧನರಾದ ಈಶ್ವರ ಗೌಡ ಇವರ ಕುಟುಂಬಕ್ಕೆ 50,000 ರು. ಸಾಂತ್ವನ ನಿಧಿ ನೀಡಲಾಯಿತು. ಸಭೆಯಲ್ಲಿದ್ದ ಗಣ್ಯರು ಯಕ್ಷಗಾನ ಕಲಾವಿದರ ಮಕ್ಕಳಿಗೆ ನೀಡುವ ಯಕ್ಷವಿದ್ಯಾಪೋಷಕ್ ಸಹಾಯಧನವನ್ನು ಕಲಾವಿದರ 62 ಮಕ್ಕಳಿಗೆ 7,11,500 ರು. ಸಾಂಕೇತಿಕವಾಗಿ ವಿತರಿಸಿದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನು ಪರಿಚಯಿಸಿದರು. ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ