ಕಾಳಸಂತೆಯಲ್ಲಿ ಪಡಿತರಧಾನ್ಯ ಮಾರಾಟ ಕಡಿವಾಣ ಹಾಕಿ

KannadaprabhaNewsNetwork |  
Published : Nov 26, 2025, 03:00 AM IST
(ಫೋಟೊ 25ಬಿಕೆಟಿ8, ಜಿ.ಪಂ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ) | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪಡಿತರಧಾನ್ಯ ಕಾಳಸಂತೆಯಲ್ಲಿ ಸಾಕಷ್ಟು ಕಡೆ ಮಾರಾಟವಾಗುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಪಡಿತರಧಾನ್ಯ ಕಾಳಸಂತೆಯಲ್ಲಿ ಸಾಕಷ್ಟು ಕಡೆ ಮಾರಾಟವಾಗುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮಕೈಗೊಳ್ಳುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿಯ ನೂತನ ಸಭಾಭವನದಲ್ಲಿ ಜರುಗಿದ ಜಿಲ್ಲಾ ಪಂಚಾಯತಿ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಕಾಳಸಂತೆಯಲ್ಲಿ ಪಡಿತರಧಾನ್ಯ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮವಹಿಸದೇ ಇರುವುದನ್ನು ಕಂಡು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಇಲ್ಲಿಯವರೆಗೆ ದಾಖಲಿಸಿದ ಪ್ರಕರಣ ಎಷ್ಟು, ಶಿಕ್ಷೆಯ ಪ್ರಮಾಣ ಎಷ್ಟು, ಜಮಖಂಡಿ ಪ್ರಕರಣ ಏನಾಗಿದೆ ಎಂಬುವುದರ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಚಿವ ಪ್ರಶ್ನೆಗಳಿಗೆ ಉತ್ತರಿಸಿದ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಅವರು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ 25 ಪ್ರಕರಣಗಳ ದಾಖಲಿಸಲಾಗಿದ್ದು, 43 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಅನಧಿಕೃತವಾಗಿ ಸಂಗ್ರಹಿಸಿಡಲಾದ 188 ಸಿಲೆಂಡರ್‌ಗಳನ್ನು ಜಪ್ತ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು. ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಕಂದಾಯ, ಆಹಾರ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ಮಾಡಿದಾಗ ಮಾತ್ರ ಈ ಕಾಳಸಂತೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು. ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾದೇವಿ.ಟಿ ಮಾತನಾಡಿ, ಆಲಮಟ್ಟಿ ಜಲಾಶಯದಲ್ಲಿ ಆಂಧ್ರಪ್ರದೇಶದಿಂದ ಬಂದು ಮೀನುಗಾರಿಕೆ ಮಾಡುತ್ತಿದ್ದಾರೆ. ಅಂತವರ ಮೇಲೆ ದಾಳಿ ನಡೆಸಿ 6 ಜನರ ಮೇಲೆ ಎಫ್ಐಆರ್ ಮಾಡಲಾಗಿದೆ. ಮೀನುಗಾರಿಕೆಗೆ ಬಳಸಲಾಗುತ್ತಿರುವ ದೋಣಿ, ಮಿಷನ್‌ಗಳನ್ನು ಜಪ್ತ ಮಾಡಲಾಗಿದೆ. ಅಲ್ಲದೇ ಅವರಿಂದ ಮುಚ್ಚಳಿಕೆ ಪತ್ರ ಸಹ ಬರೆಯಿಸಿಕೊಳ್ಳಲಾಗಿದೆ. ಈ ಜಲಾಶಯದಿಂದ ವಾರ್ಷಿಕವಾಗಿ ₹265 ಕೋಟಿ ಮೀನುಗಾರಿಕೆಯಿಂದ ಉತ್ಪಾದನೆ ಆಗುತ್ತಿದೆ ಎಂದು ಅಂದಾಜಿಸಲಾಗಿದೆ. ಲೈಸನ್ಸ್ ನೀಡಲು ಮಾರ್ಗಸೂಚಿಗಳಿದ್ದು, ಲೈಸನ್ಸ್ ಪಡೆಯದೇ ಇರುವ ಮೀನುಗಾರರ ಮೇಲೆ ಕ್ರಮಕೈಗೊಳ್ಳಲು ಮಾರ್ಗಸೂಚಿಗಳು ಇಲ್ಲ. ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಏನು ಕ್ರಮಕೈಗೊಂಡಿರುವ ಬಗ್ಗೆ ಸಚಿವರು ಮಾಹಿತಿ ಕೇಳಿದಾಗ ಇದಕ್ಕೆ ಉತ್ತರಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ.ಮನ್ನಿಕೇರಿ ಫಲಿತಾಂಶ ಸುಧಾರಣೆ 6 ಜನ ನುರಿತ ಶಿಕ್ಷಕರ ಮೂಲಕ ವಿಶೇಷ ಪಾಠ, ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ, 3 ಪ್ರಿಪರೇಷನ್ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪಠ್ಯವಾರು ಪ್ರಶ್ನೆಗಳನ್ನು ತೆಗೆದು ಉತ್ತರ ಕೇಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಸ್ವಂತ ಬುದ್ದಿ ಶಕ್ತಿಯಿಂದ ಪ್ರಶ್ನೆಗಳಿಗೆ ಉತ್ತರ ಬರೆಯುವಂತೆ ಮಾಡಲು ಕ್ರಮಕೈಗೊಳ್ಳಲು ಸಚಿವರು ಸೂಚಿಸಿದರು.ಈ ಸಂದರ್ಭದಲ್ಲಿ ಶಾಸಕ ಜೆ.ಟಿ.ಪಾಟೀಲ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಹಾಗೂ ಜಮಖಂಡಿ ಆಸ್ಪತ್ರೆ ಹೊರತುಪಡಿಸಿದರೇ ಬೀಳಗಿ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಅಲ್ಲಿ ವೈದ್ಯರ ಕೊರತೆ ಇದೆ. ಗಲಗಲಿ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಇಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಕೃತಕ ಕಾಲು ಜೋಡಣೆ, ನಾಯಿ, ಹಾವು ಕಡಿತ ಲಕ್ವಾ ಹೊಡೆದಾಗ ಸಕಾಲಕ್ಕೆ ಸೂಕ್ತ ಸಿಗುವಂತೆ ಕ್ರಮಕೈಗೊಳ್ಳಲು ಸಭೆಗೆ ತಿಳಿಸಿದಾಗ ಸೂಕ್ತಕ್ರಮಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೇಳಿದರು.ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಜಿಲ್ಲೆಯಲ್ಲಿರುವ ವಿವಿಧ ವಸತಿ ನಿಲಯಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ನಿಲಯದಲ್ಲಿ ಆಹಾರದ ಗುಣಮಟ್ಟ, ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ಪರಿಶೀಲನೆಗೆ ಚೆಕ್ಲಿಸ್ಟ ನೀಡಲಾಗಿ ಭೇಟಿ ನೀಡಿ ವರದಿ ನೀಡುತ್ತಿದ್ದಾರೆಂದು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಆಹಾರ ಗುಣಮಟ್ಟ ಪರಿಶೀಲನೆಗೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದರು. ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ ಹನಗಂಡಿಯಲ್ಲಿ ಗೋಶಾಲೆ ಮಂಜೂರಾಗಿದ್ದರೂ ಟೆಂಡರ್‌ ಪ್ರಕ್ರಿಯೆ ನಡೆಸದೇ ಅನುದಾನ ಹಿಂದಕ್ಕೆ ಹೋಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಲು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮತ್ತು ಜೆ.ಟಿ.ಪಾಟೀಲ ಮಾತನಾಡಿ, ಬಿಡಾಡಿ ದನಗಳ ಹೆಚ್ಚಾಗಿವೆ. ಅವುಗಳನ್ನು ಗೋಶಾಲೆಗೆ ಹಾಕುವ ಕೆಲಸವಾಗಬೇಕು. ಅಲ್ಲದೇ ಬೀದಿ ನಾಯಿಗಳಿಗೆ ಹಾವಳಿ ಹೆಚ್ಚಾಗಿದ್ದು, ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅನುಮತಿ ಇಲ್ಲದೇ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಚಿವರು ಜಿ.ಪಂ ಸಿಇಓ ಅವರಿಗೆ ಸೂಚಿಸಿದರು. ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ, ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಮೊಹಮ್ಮದ ಮೊಹಸೀನ್, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ