ಬಾನು ಮುಷ್ತಾಕ್‌ ಮತ್ತು ಮದನ್‌ ಗೌಡರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ

KannadaprabhaNewsNetwork | Published : Nov 1, 2024 12:15 AM

ಸಾರಾಂಶ

ಕರ್ನಾಟಕ ಸಂಭ್ರಮ-೫೦ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಸುದೀರ್ಘ ಸೇವೆ-ಸಾಧನೆ ಮಾಡಿರುವ ೫೦ ಮಹಿಳಾ ಮತ್ತು ೫೦ ಪುರುಷ ಸಾಧಕರುಗಳಿಗೆ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಹಾಸನ ಜಿಲ್ಲೆಯಿಂದ ಜನಮಿತ್ರ ಪ್ರಾದೇಶಿಕ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಮದನಗೌಡರು ಹಾಗೂ ಸಾಹಿತ್ಯ, ಸಿನಿಮಾ, ಮಹಿಳಾಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಹಿರಿಯ ಲೇಖಕಿ ಹಾಗೂ ವಕೀಲರಾದ ಡಾ.ಬಾನು ಮುಷ್ತಾಕ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ಸಂಭ್ರಮ-೫೦ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಸುದೀರ್ಘ ಸೇವೆ-ಸಾಧನೆ ಮಾಡಿರುವ ೫೦ ಮಹಿಳಾ ಮತ್ತು ೫೦ ಪುರುಷ ಸಾಧಕರುಗಳಿಗೆ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಜಾನಪದ, ವೈದ್ಯಕೀಯ ಮಾಧ್ಯಮ, ಪರಿಸರ, ಯಕ್ಷಗಾನ, ಶಿಲ್ಪಕಲೆ, ರಂಗಭೂಮಿ, ಛಾಯಾಚಿತ್ರ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ರಾಜ್ಯದ ಒಟ್ಟು ೧೦೦ ಮಂದಿ ಸಾಧಕರು ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕೊಡ ಮಾಡುತ್ತಿರುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

೨೦೨೪ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ಅವರು ಬುಧವಾರ ಬಿಡುಗಡೆಗೊಳಿಸಿದ್ದಾರೆ. ಹಾಸನ ಜಿಲ್ಲೆಯಿಂದ ಜನಮಿತ್ರ ಪ್ರಾದೇಶಿಕ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಮದನಗೌಡರು ೧೯೮೯ರಿಂದ ಈವರೆಗೂ ಸ್ಥಳೀಯ, ಪ್ರಾದೇಶಿಕ, ಮುಖ್ಯವಾಹಿನಿ ವೃತ್ತಿಪರ ಪತ್ರಿಕೋದ್ಯಮ ಜೊತೆಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಹಾಗೂ ಸಾಹಿತ್ಯ-ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿರುವ ಎಚ್.ಬಿ.ಮದನಗೌಡ ಅವರು ಮಾಧ್ಯಮ ಕ್ಷೇತ್ರದಿಂದ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾಗೆಯೇ ಸಾಹಿತ್ಯ, ಸಿನಿಮಾ, ಮಹಿಳಾಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಹಿರಿಯ ಲೇಖಕಿ ಹಾಗೂ ವಕೀಲರಾದ ಡಾ.ಬಾನು ಮುಷ್ತಾಕ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ನವೆಂಬರ್ ೧ರಂದು ಸಂಜೆ ೪.೩೦ ಗಂಟೆಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು ಹಾಸನ ಜಿಲ್ಲೆಯ ಇಬ್ಬರು ಸೇರಿದಂತೆ ಶತ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಮತ್ತೊಬ್ಬ ಸಚಿವೆ ಶೋಭಾ ಕರಂದ್ಲಾಜೆ, ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಭಾಧ್ಯ ಕ್ಷರು ಮತ್ತು ಸಚಿವ ಸಂಪುಟದ ಹಲವು ಸಚಿವರು, ಸಂಸದರು, ಶಾಸಕರು ಉಪಸ್ಥಿತರಿರುವರು. ಸುವರ್ಣ ಸಂಭ್ರಮ ಪ್ರಶಸ್ತಿಯು ೫೦ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಪ್ರಶಸ್ತಿ ಪುರಸ್ಕೃತರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ.ವಿ.ಶಿವಾನಂದ ತಗಡೂರು ಹಾಗೂ ಪದಾಧಿಕಾರಿಗಳು, ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಚ್.ವೇಣುಕುಮಾರ್ ಹಾಗೂ ಎಲ್ಲಾ ಪದಾಧಿಕಾರಿಗಳು ಅಭಿನಂದಿಸಿ, ಶುಭಕೋರಿದ್ದಾರೆ.

Share this article