ಹೊಸದುರ್ಗ: ಪುರಸ್ಕಾರ ಪಡೆದ ಮಕ್ಕಳು ದೇಶದ ಪ್ರಮುಖ ಹುದ್ದೆಗಳ ಗುರಿ ಇಟ್ಟುಕೊಂಡು ತಮ್ಮ ಮುಂದಿನ ಶಿಕ್ಷಣವನ್ನು ಹೊಂದಬೇಕು ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಸಮಾಜ ನೀಡಲಿದೆ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ಈ ಬಾರಿಯ ಕೇಂದ್ರದ ಲೋಕಸೇವಾ ಪರೀಕ್ಷೆಯಲ್ಲಿ ನಮ್ಮ ಸಮಾಜದ ಇಬ್ಬರು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಇಂತಹ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕು. ಉನ್ನತ ಹುದ್ದೆಗಳಿಗೆ ನಮ್ಮ ಸಮಾಜದ ಮಕ್ಕಳು ಬರುವಂತಾಗಬೇಕು. ಬಡತನದ ಕಾರಣಕ್ಕಾಗಿ ಓದುವ ಮಕ್ಕಳು ಹಿಂದೆ ಸರಿಯುವುದು ಬೇಡ ಇಂತಹ ಮಕ್ಕಳ ಅಭ್ಯುದಯಕ್ಕಾಗಿ ನಮ್ಮ ಸಮಾಜದಲ್ಲಿ ಸಹಾಯ ಮಾಡುವಂತಹ ಜನರಿದ್ದಾರೆ, ಈ ಸಮಾಜ ನಿಮ್ಮ ಬೆಂಬಲಕ್ಕಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜನೆ:ಕಳೆದ 19 ವರ್ಷಗಳಿಂದ ನಾನಾ ಕಾರಣಗಳಿಗಾಗಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸ್ಥಗಿತಗೊಂಡಿದೆ. ಈ ಬಾರಿ ಅಕ್ಟೋಬರ್‌ನಲ್ಲಿ ರಾಜ್ಯ 20 ಜಿಲ್ಲೆಗಳಿಂದ ತಲಾ ಮೂವರು ದ್ವಿತೀಯ ಪಿಯುಸಿ ಹಾಗೂ ಮೂವರು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪುರಸ್ಕರಿಸಲಾಗುವುದು. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಈ ವಾರದಲ್ಲಿ ಕರೆಯಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಇತ್ತೀಚಿಗೆ ನಿವೃತ್ತಿ ಹೊಂದಿದ ಸಮಾಜದ ಶಿಕ್ಷಕರುಗಳಾದ ಜಗದೀಶ್ ಹಾಗೂ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 13 ಜನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದ್ದರು.ಹರಿಹರ ಮಠದ ದಾಸೋಹ ಸಮಿತಿ ಆಧ್ಯಕ್ಷ ಷಣ್ಮುಖಪ್ಪ, ತಾಲೂಕು ಘಟಕದ ಮಹಿಳಾ ಅಧ್ಯಕ್ಷೆ ಪುಷ್ಪಲತಾ, ಸಿದ್ದರಾಮಣ್ಣ ಮತ್ತಿತರರಿದ್ದರು.