ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ತಿರುಮಲೆ ಗ್ರಾಮದಲ್ಲಿ ಹಲವಾರು ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ತಾಲೂಕಿಗೆ ಹೇಮಾವತಿ ನೀರು ತರಲು ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆಯೇ ಹೊರತು ನನ್ನ ಮಗಳ ಮದುವೆ ಮಾಡುತ್ತಿಲ್ಲ. ಸಾರ್ವಜನಿಕರ ಹಿತದೃಷ್ಠಿಯಿಂದ ಈ ಕಾರ್ಯಕ್ರಮವೇ ಹೊರತು ಪಕ್ಷದ ಕಾರ್ಯಕ್ರಮವಲ್ಲ. ತಾಲೂಕಿನಲ್ಲಿ ರೈತರು ಬದುಕಿದ್ದರೆ ರಸ್ತೆ ತಡೆ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಬೇಕು. ಅಲ್ಲಿ ನಮ್ಮ ಶಕ್ತಿ ಪ್ರದರ್ಶನ ಆಗಬೇಕು ಎಂದು ಶಾಸಕರು ಹೇಳಿದರು.
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಬಗ್ಗೆ ಕೆಲವರು ಓಟಿನ ಆಸೆಗೋಸ್ಕರ ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾಗಡಿ ತಾಲೂಕಿಗೆ ಎಷ್ಟು ನೀರು ಹಂಚಿಕೆಯಾಗಿದೆ ಎಂಬುದರ ಮಾಹಿತಿಯನ್ನು ಗುರುವಾರ ತಿಳಿಸುತ್ತೇನೆ. ಯಾವ ರೀತಿ ಕೃಷ್ಣ ಕೊಳ್ಳದವರು, ಕಾವೇರಿ ಕೊಳ್ಳದ ನಮ್ಮ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗುರುವಾರದ ಪ್ರತಿಭಟನೆಯಲ್ಲಿ ತಿಳಿಸುತ್ತೇನೆ. ತುಮಕೂರಿನವರು ಅನಾವಶ್ಯಕವಾಗಿ ನಮ್ಮ ಜೊತೆ ಕಾಲು ಕೆರೆದುಕೊಂಡು ಜಗಳ ಮಾಡಿಕೊಳ್ಳುವುದು ಬೇಡ. ನಮಗೆ ಹಂಚಿಕೆ ಆಗಿರುವ ನೀರನ್ನು ನಮಗೆ ಕೊಡಿ, ನೀರು ಹರಿಸುವುದರ ನಿಯಂತ್ರಣ ಮಾಡುವವರು ತುಮಕೂರಿನವರು. ನೀರು ಜಾಸ್ತಿ ಬಂದಾಗ ಬಿಡಬಹುದು, ಕಡಿಮೆಯಾದಾಗ ನಿಲ್ಲಿಸಬಹುದು. ಲಿಂಕ್ ಕೆನಾಲ್ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಅವರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದು ಶಾಸಕರು ತಿಳಿಸಿದರು.ಹೇಮಾವತಿ ನೀರನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತಾರೆ ಎಂದು ತುಮಕೂರಿನವರು ಅಪಪ್ರಚಾರ ಮಾಡುತ್ತಿರುವುದರಿಂದ ಗೃಹ ಸಚಿವ ಜಿ.ಪರಮೇಶ್ವರ್ ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ಹೇಳಿಕೆ ನೀಡಿದ್ದಾರೆ. ವಾಸ್ತವಾಂಶವೆಂದರೆ 66.6ರಷ್ಟು ನೀರು ಹಂಚಿಕೆಯಾಗಿದ್ದು, ಅದನ್ನು ಪಡೆಯುವವರೆಗೆ ಬಿಡುವುದಿಲ್ಲ, ಹೋರಾಟ ನಡೆಸುತ್ತೇವೆ ಎಂದು ಬಾಲಕೃಷ್ಣ ಹೇಳಿದರು.
ಪುರಸಭಾಧ್ಯಕ್ಷೆ ರಮ್ಯನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯ ರಂಗಹನುಮಯ್ಯ, ನಾಮಿನಿ ಸದಸ್ಯ ತಿರುಮಲೆ ಪ್ರಕಾಶ್, ರಾಧರಾಜೇಶ್, ಗಂಗಣ್ಣ, ಅಂಗನವಾಡಿ ಕಾರ್ಯಕರ್ತೆ ಚಂದ್ರಕಲಾ, ಚಂದ್ರಶೇಖರ್, ಡೇರಿ ಬಸವರಾಜ್, ಮುಖ್ಯಾಧಿಕಾರಿ ಶಿವರುದ್ರಯ್ಯ, ಇಂಜಿನಿಯರ್ ಪ್ರಶಾಂತ್ ಮತ್ತಿತರರು ಇದ್ದರು.